ವಿಜಯಪುರ: ಕೇಂದ್ರ ಸರ್ಕಾರ ಜನ ವಿರೋಧಿ ನೀತಿ ಅನುಸರಿಸಿ ಕೋಮುವಾದೀಕರಣ ಜಾರಿಗೊಳಿಸುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕೇಂದ್ರ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ವಿರೋಧಿ ಆಡಳಿತ ನಡೆಸಲು ಮುಂದಾಗಿದೆ. ಅಲ್ಲದೇ ರಾಜ್ಯ ಸರ್ಕಾರಗಳ ಮೂಲಕ ಕಾರ್ಮಿಕ ವಿರೋಧಿ ನೀತಿ, ರೈತ ವಿರೋಧಿ ನೀತಿಗಳನ್ನು ಜಾರಿ ಮಾಡಿ ಕಾರ್ಪೋರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿದೆ. ದೇಶದಲ್ಲಿ ಬಡತನ, ನಿರುದ್ಯೋಗ ಸಮಸ್ಯೆಗಳು ಹೆಚ್ಚಾಗಿವೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಯಾವುದೇ ಅಭಿವೃದ್ಧಿಗೆ ಒತ್ತು ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಇನ್ನು ಶಿಕ್ಷಣ ವ್ಯವಸ್ಥೆ ಕೂಡ ವ್ಯಾಪಾರೀಕರಣ, ಖಾಸಗೀಕರಣ ಮಾಡಿ ಬಡ ಮಕ್ಕಳಿಗೆ ಅನ್ಯಾಯ ಮಾಡಲು ಹೊರಟಿದೆ. ರೈತರಿಗೆ ಸರಿಯಾದ ಯೋಜನೆಗಳನ್ನು ರೂಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ಸರ್ಕಾರ ಜನ ವಿರೋಧಿ ನೀತಿಗಳನ್ನು ಕೈ ಬಿಟ್ಟು ಜನ ಪರವಾದ ಆಡಳಿತ ನೀಡಲು ಮುಂದಾಗಬೇಕು. ಕೊರೊನಾ ಭೀತಿಯಿಂದ ಸಂಕಷ್ಟಕ್ಕೆ ಸಿಲುಕಿದ ಜನರ ಪರವಾಗಿ ನಿಲ್ಲಬೇಕು. ದೇಶದಲ್ಲಿ ಯುವಕರಿಗೆ ಉದ್ಯೋಗಾವಕಾಶಗಳನ್ನು ನೀಡಬೇಕು. ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.