ವಿಜಯಪುರ: ಮಹಾರಾಷ್ಟ್ರದಲ್ಲಿ ಆಗುತ್ತಿರುವ ಉತ್ತಮ ಮಳೆಯಿಂದ ಜಿಲ್ಲೆಯ ಲಾಲ್ ಬಹಾದ್ದೂರ ಶಾಸ್ತ್ರಿ ಜಲಾಶಯ 15 ದಿನಗಳ ಮುಂಚೆ ಅರ್ಧ ಭರ್ತಿಯಾಗಿದೆ. ಆದರೆ, ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆ ಪ್ರಮಾಣ ಇಳಿಮುಖವಾಗಿರುವ ಕಾರಣ ಜಲಾಶಯದ ಒಳಹರಿವು ಕಡಿಮೆಯಾಗಿದೆ.
123.81 ಟಿಎಂಸಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಶುಕ್ರವಾರ 62.95 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಶುಕ್ರವಾರ ಜಲಾಶಯದ ಒಳಹರಿವು 514.88 ಕ್ಯೂಸೆಕ್ ನೀರು ಬಂದಿದೆ. ಆಲಮಟ್ಟಿ ಹಿನ್ನೀರಿನ ಮುಳವಾಡ ಏತ ನೀರಾವರಿ ಯೋಜನೆ ಕಾಲುವೆಯ ಮೂಲಕ ಕೆರೆಗೆ 600 ಕ್ಯೂಸೆಕ್ ಹಾಗೂ ಎನ್ಟಿಪಿಸಿಗೆ 30 ಕ್ಯೂಸೆಕ್ ಸೇರಿ 1.130 ಕ್ಯುಸೆಕ್ ನೀರು ಜಲಾಶಯದಿಂದ ಹೊರ ಹೋಗುತ್ತಿದೆ.
ಜಲಾಶಯದಲ್ಲಿ ಇಂದು 514.88 ಮೀಟರ್ವರೆಗೆ ನೀರು ಇದೆ. ಕಳೆದ ವರ್ಷ ಈ ದಿನ 507.98 ಮೀಟರ ಸಂಗ್ರಹವಿತ್ತು. ಕಳೆದ ವರ್ಷ ಜುಲೈ 11ಕ್ಕೆ ಜಲಾಶಯ ಅರ್ಧ ಭರ್ತಿಯಾಗಿತ್ತು. ಈ ವರ್ಷ ಜೂನ್ ಕೊನೆ ವಾರವೇ ಜಲಾಶಯ ಅರ್ಧ ಭರ್ತಿಯಾಗಿದೆ.
ವಿದ್ಯುತ್ ಘಟಕ ಸಿದ್ಧ:
ಆಲಮಟ್ಟಿ ಜಲಾಶಯದಿಂದ ಹೊರಗಡೆ ನೀರು ಬಿಡಲು ಆರಂಭವಾಗಿದೆ. ಆ ನೀರಿನಿಂದ ವಿದ್ಯುತ್ ಉತ್ಪಾದಿಸಲು ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರ ಸಿದ್ದವಾಗಿದೆ. ಪೂರ್ಣ ಪ್ರಮಾಣದಲ್ಲಿ ನೀರು ದೊರೆತರೆ ಇಲ್ಲಿರುವ 290 ಮೆಗಾವ್ಯಾಟ್ ಸಾಮರ್ಥ್ಯದ ಆರು ಘಟಕಗಳಿಂದ ನಿತ್ಯ ಗರಿಷ್ಠ 7 ದಶಲಕ್ಷ ಯುನಿಟ್ ವರೆಗೂ ವಿದ್ಯುತ್ ಉತ್ಪಾದನೆ ಮಾಡಬಹುದು ಎಂದು ಕೆಬಿಜೆಎನ್ಎಲ್ ಮೂಲಗಳು ತಿಳಿಸಿವೆ.