ವಿಜಯಪುರ : ಜಿಲ್ಲೆಗೆ ಭೀಮಾತೀರ ಎನ್ನುವುದನ್ನು ಕೊನೆಗಾಣಿಸಲು ಕೆಲಸ ಮಾಡುತ್ತಿದ್ದೇನೆ. ಚಡಚಣ ತಾಲೂಕಿನ ಎರಡು ಗ್ಯಾಂಗ್ಗಳ ಜೊತೆ ಮಾತನಾಡಿದ್ದೇವೆ. ಎರಡೂ ಕಡೆಯವರಿಗೆ ತಿಳಿವಳಿಕೆ ನೀಡಲಾಗಿದೆ. ಪರಾರಿಯಾಗಿರೋ ಆರೋಪಿಗಳಿಗೆ ಪ್ರೊಕ್ಲಿಮ್ಡ್ ಆಫೆಂಡರ್ ಮಾಡಿ ಅವರ ಆಸ್ತಿ ಸೀಜ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ನಗರದ ಚಿಂತನ್ ಹಾಲ್ ಆವರಣದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿರುವ ನೂರಾರು ಸಾರ್ವಜನಿಕರು ಪೊಲೀಸ್ ಇಲಾಖೆ ವಿವಿಧ ಸಂಕಷ್ಟಗಳ ಬಗ್ಗೆ ಎಡಿಜಿಪಿ ಎದುರು ತೋಡಿಕೊಂಡರು. ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ವಿವಿಧ ದೂರುಗಳನ್ನು ಜನರು ನೀಡಿದರು. ಸ್ಥಳದಲ್ಲೇ ಪೊಲೀಸ್ ಅಧಿಕಾರಿಗಳನ್ನು ಎಡಿಜಿಪಿ ತರಾಟೆಗೆ ತಗೆದುಕೊಂಡರು.
ಪಾಲ್ತುಗಿರಿ ಬೇಡ: ಇದೇ ವೇಳೆ, ಪೊಲೀಸ್ ಮಹಾ ಸಂಘದ ಹೆಸರು ಹೇಳಿಕೊಂಡು ಬಂದವನನ್ನು ಅಲೋಕ್ ಕುಮಾರ್ ತೀವ್ರ ತರಾಟೆಗೆ ತೆಗೆದುಕೊಂಡರು. ಅಹವಾಲು ಸ್ವೀಕಾರ ವೇಳೆ ಪೊಲೀಸ್ ಅಲ್ಲದ ವ್ಯಕ್ತಿ ಪೊಲೀಸ್ ಮಹಾ ಸಂಘದ ಸದಸ್ಯ ಎಂದು ಮನವಿ ನೀಡಲು ಬಂದಿದ್ದು ಗೊತ್ತಾಗುತ್ತಿದ್ದಂತೆಯೇ ಆತನಿಗೆ ಎಡಿಜಿಪಿ ಕ್ಲಾಸ್ ತೆಗೆದುಕೊಂಡರು.
ನೀನು ಪೊಲೀಸಾ ಎಂದು ಪ್ರಶ್ನಿಸಿದ ಅವರು, ಪೊಲೀಸ್ ಹೆಸರು ಯಾಕೆ ಬಳಸ್ತಿದ್ದೀಯಾ ಎಂದು ಕೆಂಡಾಮಂಡಲರಾದರು. ಪಾಲ್ತುಗಿರಿ ಬೇಡ. ಮೊದಲು ಇಲ್ಲಿಂದ ಜಾಗ ಖಾಲಿ ಮಾಡು ಎಂದು ಎಚ್ಚರಿಕೆ ನೀಡಿದ ಅವರು, ಪೊಲೀಸ್ ಹೆಸರು ಬಳಸಿದರೆ ಹುಷಾರ್. ಇವನ ಪೋಟೋ ಹೊಡೆದುಕೊಂಡು ಕೇಸ್ ರಿಜಿಸ್ಟರ್ ಮಾಡಿ ಎಂದು ಸ್ಥಳದಲ್ಲಿದ್ದ ಪೊಲೀಸರಿಗೆ ಸೂಚಿಸಿದರು.
ಭೀಮಾತೀರ ಎನ್ನುವುದನ್ನು ಕೊನೆಗಾಣಿಸಲು ಕೆಲಸ : ಭೀಮಾತೀರದ ಮಲ್ಲಿಕಾರ್ಜುನ ಚಡಚಣ ಮತ್ತು ಆತನ ಪತ್ನಿ ವಿಮಲಾಬಾಯಿ ಮೇಲೂ ನಾನ್ ಬೇಲೆಬಲ್ ವಾರಂಟ್ ಜಾರಿಯಾಗಲಿದೆ. ಈ ಭಾಗದ ಜನರಿಗೆ ಶಾಶ್ವತ ಶಾಂತಿ ಸಿಗಬೇಕಿದೆ. ಚಡಚಣ ಹಾಗೂ ಭೈರಗೊಂಡ ಎರಡೂ ಕಡೆಯವರಿಗೆ ಕಾನೂನು ಭಯ ಇರಬೇಕು, ಕಾನೂನು ಪರವಾಗಿ ಇದ್ದರೆ ಅವರಿಗೆ ಇಲಾಖೆ ಸಹಕಾರ ನೀಡುತ್ತದೆ ಎಂದರು.
ಔರಾದ್ಕರ್ ವರದಿ ಜಾರಿ ವಿಚಾರ: ವರದಿ ಜಾರಿಯ ಅಂಕಿ ಅಂಶಗಳು ಆಗಿವೆ, ಕೆಲವೊಂದು ಪರಿಶೀಲನೆ ಯಲ್ಲಿದೆ, ಅದನ್ನು ಮಾಡುತ್ತಾರೆ ಎಂದು ಎಡಿಜಿಪಿ ಅಲೋಕ ಕುಮಾರ ಹೇಳಿದರು. ನಕಲಿ ಪತ್ರಕರ್ತರ ಹಾವಳಿ ವಿಚಾರ ಈ ಕುರಿತು ಎಸ್ಪಿ ಅವರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಇದನ್ನೂ ಓದಿ : ಕನ್ನಡದಲ್ಲಿ 'ಬಿಗ್‌ಹಾತ್' ಆ್ಯಪ್ ಬಿಡುಗಡೆ