ಮುದ್ದೇಬಿಹಾಳ : ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿನ ಬೆಳೆ ಹಾನಿಯಾಗಿರುವ ಘಟನೆ ತಾಲೂಕಿನ ಹಂಡರಗಲ್ ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಹಂಡರಗಲ್ ಗ್ರಾಮದ ಮಹ್ಮದ್ ಯೂನೂಸ್ ಮಾಗಿ ಅವರಿಗೆ ಸೇರಿದ ನಾಲ್ಕು ಎಕರೆ 27 ಗುಂಟೆಯಲ್ಲಿ ಬೆಳೆದಿದ್ದ ಕಬ್ಬಿಗೆ ಬೆಂಕಿ ತಗುಲಿ ಅಂದಾಜು 4.90 ಲಕ್ಷ ರೂ., ಇವರ ಸಹೋದರ ಮಹ್ಮದ್ ಹುಸೇನ್ ಮಾಗಿ ಅವರಿಗೆ ಸೇರಿದ ಮೂರು ಎಕರೆಯಲ್ಲಿದ್ದ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ.
ಹಾಗೂ ಲಾಲ್‌ಸಾಬ್ ಮುದ್ದೇಬಿಹಾಳ ಇವರಿಗೆ ಸೇರಿದ ಸರ್ವೆ ನಂ.69/5ರಲ್ಲಿ 4.5 ಎಕರೆ ಜಮೀನಿನಲ್ಲಿದ್ದ ಕಬ್ಬಿಗೆ ಬೆಂಕಿ ಬಿದ್ದು ಅಂದಾಜು 4 ಲಕ್ಷ ರೂ. ಹಾನಿಯಾಗಿದೆ ಎಂದು ರೈತರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ತಕ್ಷಣ ಮುದ್ದೇಬಿಹಾಳದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಹೊಲಗಳು ಅಕ್ಕಪಕ್ಕದಲ್ಲಿರುವುದರಿಂದ ಹಾನಿಯ ಪ್ರಮಾಣ ಹೆಚ್ಚಲು ಕಾರಣವಾಗಿದೆ ಎಂದು ರೈತರು ತಿಳಿಸಿದ್ದಾರೆ.