ಮುದ್ದೇಬಿಹಾಳ: ಹೃದಯಹೀನ ತಾಯಿಯೊಬ್ಬಳು ಎರಡು ತಿಂಗಳ ಹಸುಗೂಸನ್ನು ನಗರದ ಬಸ್ ನಿಲ್ದಾಣದಲ್ಲಿಯೇ ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಮಗುವನ್ನು ಬಟ್ಟೆಯಲ್ಲಿ ಸುತ್ತಿರುವ ತಾಯಿ, ಪಟ್ಟಣದ ಸಾರಿಗೆ ಘಟಕಕ್ಕೆ ಸೇರಿದ ನಿಲ್ದಾಣದ ಪಾಸ್ ವಿತರಿಸುವ ಕೊಠಡಿ ಬಳಿ ಇಟ್ಟು ಹೋಗಿದ್ದಾಳೆ. ನಂತರ ಮಗು ಅಳುತ್ತಿದ್ದ ಶಬ್ದದಿಂದ ಮಗುವಿನ ಪತ್ತೆಯಾಗಿದೆ. ಕೂಡಲೇ ನೂರಾರು ಜನರು ಜಮಾಯಿಸಿದ್ದಾರೆ. ಈ ವೇಳೆ ಜನ ಸೇರಿದ್ದನ್ನು ಗಮನಿಸಿದ ನಾಲತವಾಡದಿಂದ ಬಾಗೇವಾಡಿಗೆ ತೆರಳುತ್ತಿದ್ದ ನೀಲಮ್ಮ ಗೋಂಧಳೆ ಎಂಬುವವರು ಮಗುವನ್ನು ಎತ್ತಿ ಕೆಲಕಾಲ ಆರೈಕೆ ಮಾಡಿದ್ದಾರೆ. ನಂತರ ಶಿರೋಳ ಗ್ರಾಮದ ಆಟೋ ಚಾಲಕ ಯಮನೂರಿ ಬೂದಿಹಾಳ ಅವರು ಮಗುವನ್ನು ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಮೇಲ್ವಿಚಾರಕರಾದ ರೇಣುಕಾ ಹಳ್ಳೂರ, ಗಂಗಾ ತೋಟದ, ಶರಣು ಬೂದಿಹಾಳಮಠ ಫೌಂಡೇಶನ್ ಸಂಚಾಲಕ ಮಹಾಂತೇಶ ಬೂದಿಹಾಳಮಠ, ಶ್ರೀಶೈಲ ಹೂಗಾರ ಮೊದಲಾದವರು ಇದ್ದರು.
ಸಾಂತ್ವನ ಕೇಂದ್ರಕ್ಕೆ ಸಿಡಿಪಿಓ ಭೇಟಿ: ಅನಾಥವಾಗಿ ಬಿಟ್ಟು ಹೋಗಿದ್ದ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ಸುದ್ದಿ ತಿಳಿದು ಸಿಡಿಪಿಓ ಸಾವಿತ್ರಿ ಗುಗ್ಗರಿ ಅವರು ಆಸ್ಪತ್ರೆಗೆ ಭೇಟಿ ನೀಡಿದರು. ನಂತರ ಮಗುವನ್ನು ರಕ್ಷಿಸಲು ಶ್ರಮಿಸಿದ ಮಹಿಳೆ ನಾಲತವಾಡದ ನೀಲಮ್ಮ ಗೋಂಧಳೆ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಮಗುವನ್ನು ಅನಾಥವಾಗಿ ಬಿಟ್ಟು ಹೋಗಿರುವುದು ಕಾನೂನು ಪ್ರಕಾರ ಅಪರಾಧ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತೇನೆ. ಅಲ್ಲದೆ, ಈ ಮಗುವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕಳುಹಿಸಿಕೊಡಲಾಗುವುದು. ಮಗು ಅಪೌಷ್ಠಿಕತೆಯಿಂದ ಬಳಲುತ್ತಿದೆ. ಚಿಕಿತ್ಸೆಯ ಅಗತ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನು ಆರೈಕೆ ಕೇಂದ್ರಕ್ಕೆ ಕಳುಹಿಸಿಕೊಡುತ್ತೇವೆ ಎಂದು ಹೇಳಿದರು.
'ನಾನೇ ಮಗು ಸಾಕಿಕೊಳ್ಳುತ್ತೇನೆ ಕೊಡ್ರಿ': ನನಗೆ ನಾಲ್ಕು ಗಂಡು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳಿಲ್ಲ. ನಾನೇ ಈ ಮಗುವನ್ನು ಸಾಕಿಕೊಳ್ಳುತ್ತೇನೆ, ಕೊಡಿ ಎಂದು ವೈದ್ಯರು, ಸಿಡಿಪಿಓ ಎದುರಿಗೆ ನಾಲತವಾಡದ ನೀಲಮ್ಮ ಗೋಂಧಳೆ ಗೋಗರೆದ ಘಟನೆ ನಡೆಯಿತು. ಇದಕ್ಕೆ ಉತ್ತರಿಸಿದ ಸಿಡಿಪಿಓ, ಕಾನೂನು ಪ್ರಕಾರ ಮಗುವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಇದನ್ನೂ ಓದಿ: ಶ್ರೀಗಂಧ ಕಳ್ಳರಿಗೆ ಮನಸೋಇಚ್ಛೆ ಒದ್ದು ಬಂಧಿಸಿದ ಅರಣ್ಯ ಇಲಾಖೆ ಸಿಬ್ಬಂದಿ