ವಿಜಯಪುರ : ನಗರದಲ್ಲಿರುವ ಒಂದು ಕುಟುಂಬ ತಮ್ಮ ಪ್ರೀತಿಯ ನಾಯಿಗೂ ಸೀಮಂತ ಕಾರ್ಯ ಮಾಡಿದ ಅಪರೂಪದ ಘಟನೆ ನಡೆದಿದೆ.
ಸೋಲಾಪುರ ರಸ್ತೆಯ ನಿವಾಸಿ, ಸಾಮಾಜಿಕ ಕಾರ್ಯಕರ್ತ ಪ್ರಕಾಶ ಕುಂಬಾರ್ ದಂಪತಿ ಅದ್ದೂರಿ ಹಾಗೂ ಸಂಭ್ರಮದಿಂದ ತಮ್ಮ ಸಾಕು ನಾಯಿಗೆ ಸೀಮಂತ ಮಾಡಿದ್ದಾರೆ. ತಮ್ಮ ಮನೆ ಮಗಳಂತಿರುವ ಈ ಪೊಮೆರೇನಿಯನ್ ಸಾಕು ನಾಯಿಯ ಹೆಸರು ಸೋನಿಯಾ. ಸದ್ಯ ಗರ್ಭವತಿಯಾಗಿರುವ ಸೋನಿಯಾ ಸೀಮಂತಕ್ಕೆ ಅಕ್ಕಪಕ್ಕದವರನ್ನು ಆಹ್ವಾನಿಸಲಾಗಿತ್ತು. ಈ ನಾಯಿಯನ್ನ ತನ್ನ ಸ್ವಂತ ಮಗಳಂತೆ ನೋಡುತ್ತಿದ್ದ ನ್ಯಾಯವಾದಿ ಭೃಂಗೇಶ್ ಅವರು, ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಮುತ್ತೈದೆಯರು ಗರ್ಭಿಣಿ ಶ್ವಾನ ಸೋನಿಯಾ ಹಣೆಗೆ ಕುಂಕುಮವನ್ನಿಟ್ಟು, ಮುಡಿಗೆ ಹೂವು ತೊಡಿಸಿ ಆರತಿ ಬೆಳಗಿದರು. ನಿತ್ಯ ತನ್ನ ಪೊಮೆರೇನಿಯನ್ ಶ್ವಾನದ ಜತೆ ಆಟವಾಡುತ್ತಾ ಉತ್ತಮ ಸ್ನೇಹಿತರಾಗಿದ್ದ ಮನೆ ಮಕ್ಕಳು, ಅಕ್ಕಪಕ್ಕದ ಮನೆಯಯವರು ಸೀಮಂತ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ಪ್ರಾಣಿಗಳನ್ನ ಹೀನಾಯವಾಗಿ ಕಾಣುವ ಅದೆಷ್ಟೋ ಜನರ ಮಧ್ಯೆ ಈ ಕುಟುಂಬ ಸಾಕುನಾಯಿಗೆ ಮಗಳ ಸ್ಥಾನ ಕೊಟ್ಟು ಅದ್ದೂರಿಯಾಗಿ ಸೀಮಂತ ಮಾಡಿದ್ದು, ಪ್ರಾಣಿ ಪ್ರಿಯರ ಮೆಚ್ಚುಗೆಗೆ ಕಾರಣವಾಗಿದೆ.