ಮುದ್ದೇಬಿಹಾಳ : ಸೇತುವೆ ಮೇಲೆ ತಿರುಗಾಡುತ್ತಿದ್ದ ಬಿಡಾಡಿ ಕುದುರೆಯನ್ನು ಉಳಿಸಲು ಹೋಗಿ ಸರಣಿ ಅಪಘಾತ ಸಂಭವಿಸಿರುವ ಘಟನೆ ತಾಲೂಕಿನ ತಂಗಡಗಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲೆ ನಡೆದಿದೆ.
ಚಾಮರಾಜನಗರದಿಂದ ಮುದ್ದೇಬಿಹಾಳಕ್ಕೆ ಬರುತ್ತಿದ್ದ ಕಾರು ಸೇತುವೆ ಮೇಲೆ ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದ ಕುದುರೆಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲಿ ಹೋಗಿ ಪಕ್ಕದ ಡಿವೈಡರ್ಗೆ ಅಪ್ಪಳಿಸಿದೆ. ಪರಿಣಾಮ ಕಾರು ಪಲ್ಟಿ ಆಗಿದೆ. ಈ ವೇಳೆ, ಹಿಂದೆ ಬರುತ್ತಿದ್ದ ಬೈಕ್ ಸವಾರ ಪಲ್ಟಿಯಾದ ಕಾರ್ಗೆ ಡಿಕ್ಕಿ ಹೊಡೆದು ಕೆಳಕ್ಕೆ ಉರುಳಿದ್ದಾನೆ.
ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೂ ಬೈಕ್ ಹಾಗೂ ಕಾರು ಎರಡೂ ಕೆಳಕ್ಕೆ ಉರುಳುವ ಸಾಧ್ಯತೆ ಇತ್ತು. ಆದರೆ ಇಬ್ಬರೂ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಸೇತುವೆ ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು ಜಖಂಗೊಂಡಿದೆ. ಆದರೆ, ಅಪಘಾತದಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಘಟನೆ ನಡೆದು ಕೆಲವು ತಾಸು ಗತಿಸಿದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೇ ಇದ್ದುದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಕಾರು ಅಪಘಾತವಾದ ಬಳಿಕ ಕೆಲಕಾಲ ಸೇತುವೆ ಮೇಲೆ ಟ್ರಾಫಿಕ್ ಜಾಮ್ ಉಂಟಾಯಿತು.
ದಿನಾಲು ಈ ಕುದುರೆ ಬ್ರೀಡ್ಜ್ ಮೇಲೆ ಓಡಾಡುತಿದ್ದು, ಹಲವು ಅಪಘಾತ ಸಂಭವಿಸಿವೆ. ಆದರೆ, ಬಿಡಾಡಿಯಾಗಿ ಓಡಾಡುತ್ತಿರುವ ಕುದುರೆಯನ್ನು ಹಿಡಿದು ಬೇರೆ ಎಲ್ಲಾದರೂ ಸಾಗಿಸುವ ಕೆಲಸ ಆಗಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ. ಅಪಘಾತದ ನಂತರ ಕುದುರೆ ಸ್ಥಳದಿಂದ ಕಾಲ್ಕಿತ್ತಿರುವ ವಿಡಿಯೋ ವೈರಲ್ ಆಗಿದೆ.