ಮುದ್ದೇಬಿಹಾಳ: ಕೊರೊನಾ ವೈರಸ್‌ನಿಂದಾಗಿ ಗೋವಾದ ವಿವಿಧ ಸ್ಥಳದಲ್ಲಿ ಅತಂತ್ರರಾಗಿದ್ದ 500 ಕಾರ್ಮಿಕರು ಕೊನೆಗೂ ತಮ್ಮ ತವರೂರಿಗೆ ಮರಳಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಗೋವಾದಲ್ಲಿ ಕಳೆದ 45 ದಿನಕ್ಕೂ ಹೆಚ್ಚು ಕಾಲ ಹೊತ್ತೊತ್ತಿಗೆ ಊಟವಿಲ್ಲದೆ ಕೈಯಲ್ಲಿ ಕೆಲಸವಿಲ್ಲದೆ ಪರಿತಪಿಸುತ್ತಿದ್ದ ಮುದ್ದೇಬಿಹಾಳ ತಾಲೂಕಿನ ಕಾರ್ಮಿಕರನ್ನು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸ್ವತಃ ಗೋವಾ ಗಡಿಗೆ ತೆರಳಿ ಬಸ್‌ಗಳ ಮೂಲಕ ಊರಿಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ನಿರಂತರ ಗೋವಾ ಕಾರ್ಮಿಕರ ಸಂಪರ್ಕದಲ್ಲಿರುವ ಜೊತೆಗೆ ಸರ್ಕಾರದ ಹಿರಿಯ ಅಧಿಕಾರಿಗಳು, ಸಚಿವರ ಜೊತೆ ಮಾತನಾಡಿ ಕಾರ್ಮಿಕರನ್ನು ಸುರಕ್ಷಿತವಾಗಿ ಊರಿಗೆ ತಲುಪಿಸಿ ಕಾರ್ಮಿಕರ ಮುಖದಲ್ಲಿ ನೆಮ್ಮದಿಯ ಭಾವನೆ ಮೂಡಿಸಿದ್ದಾರೆ. ಶಾಸಕರ ಕಾರ್ಯವನ್ನು ಮನದುಂಬಿ ಕೊಂಡಾಡಿದ ವಲಸೆ ಕಾರ್ಮಿಕರು, ಕಣ್ಣೀರು ಹಾಕಿ ನಿಮಗೆ ಒಳ್ಳೆಯದಾಗಲಿ ಎಂದು ಕೈ ಮುಗಿದು ಶುಭ ಹಾರೈಸಿದ್ದಾರೆ.
ಪಟ್ಟಣದ ಬಸ್ ನಿಲ್ದಾಣಕ್ಕೆ ಗೋವಾದಿಂದ ಸುಮಾರು 14 ಬಸ್‌ಗಳಲ್ಲಿ ವಲಸೆ ಕಾರ್ಮಿಕರು ಆಗಮಿಸಿದರು. ಮೊದಲೇ ಗುರುತಿಸಿದ್ದ ಸಾಮಾಜಿಕ ಅಂತರದ ವೃತ್ತಗಳಲ್ಲಿ ಕಾರ್ಮಿಕರನ್ನು ನಿಲ್ಲಿಸಿ ಸ್ಕ್ರೀನಿಂಗ್ ಹಾಗೂ ಆರೋಗ್ಯ ತಪಾಸಣೆ ಮಾಡಿ ನೋಂದಣಿ ಮಾಡಲಾಯಿತು. ಬಳಿಕ ಹೋಂ ಕ್ವಾರಂಟೈನ್ ಕುರಿತು ಮಾಹಿತಿ ನೀಡಲಾಯಿತು. ಈ ವೇಳೆ ಗೋವಾ ಗಡಿ ಭಾಗದ ಚೊರ್ಲಾ ಚೆಕ್ ಪೋಸ್ಟ್ನಲ್ಲಿ ಕಾರ್ಮಿಕರನ್ನು ಕರೆ ತಂದ ಬಸ್ ಚಾಲಕರಿಗೆ ದಿನಸಿ ಕಿಟ್ ವಿತರಿಸಲಾಯಿತು.