ವಿಜಯಪುರ: ರಾಜ್ಯದಲ್ಲಿ ವಿನೂತನವಾಗಿ ಆಯೋಜನೆ ಮಾಡಿದ್ದ ಮೆಗಾ ಇ-ಲೋಕ್ ಅದಾಲತ್‍ನಲ್ಲಿ ವಿಜಯಪುರ ಜಿಲ್ಲೆಯಲ್ಲಿ ಗುರುತಿಸಿದ್ದ ಒಟ್ಟು 10,395 ಪ್ರಕರಣಗಳ ಪೈಕಿ 8,921 ಪ್ರಕರಣಗಳನ್ನು ಇ-ಲೋಕ್ ಅದಾಲತ್‍ನಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಬಿ. ಹೊಸಮನಿ ತಿಳಿಸಿದ್ದಾರೆ.
ರಾಜ್ಯದಲ್ಲಿ ನಡೆದ 30 ಜಿಲ್ಲೆಗಳ ಇ-ಲೋಕ್ ಅದಾಲತ್ ಅಂಕಿ-ಅಂಶ ಗಣನೆಗೆ ತೆಗೆದುಕೊಂಡಾಗ ವಿಜಯಪುರ ಜಿಲ್ಲೆ ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದವರ ಪೈಕಿ ಮೊದಲ 3ನೇ ಸ್ಥಾನದಲ್ಲಿದೆ. ಇ-ಲೋಕ್ ಅದಾಲತ್‍ನಲ್ಲಿ ವಿಜಯಪುರ ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ರಾಜಿಗೆ ಒಳಪಡಬಹುದಾದ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ವರ್ಗಾವಣೆಗಳ ಮೂಲಕ ಲಿಖಿತ ಕಾಯ್ದೆಯ ಪ್ರಕರಣಗಳು, ಮೋಟಾರು ವಾಹನ ಅಪಘಾತದಲ್ಲಿ ಪರಿಹಾರ ಕೋರಿರುವ ಪ್ರಕರಣಗಳು, ವಿಚ್ಛೇದನ ಹೊರತುಪಡಿಸಿ ಕೌಟುಂಬಿಕ ವ್ಯಾಜ್ಯಗಳು ವಿಭಾಗದ ದಾವೆಗಳು ಹಾಗೂ ಇತರೆ ಸಿವಿಲ್ ವ್ಯಾಜ್ಯಗಳನ್ನು ಕರ್ನಾಟಕ ಉಚ್ಛ ನ್ಯಾಯಾಲಯ ಎಸ್.ಒ.ಪಿ. ಪ್ರಕಾರ ವಿಡಿಯೋ ಕಾನ್ಫರನ್ಸ್ ಮೂಲಕ ಇತ್ಯರ್ಥಪಡಿಸಲಾಗಿದೆ.
ಇ-ಲೋಕ್ ಅದಾಲತ್ ಯಶಸ್ವಿಯಾಗಿ, ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಇತ್ಯರ್ಥಗೊಳ್ಳುವ ಮೂಲಕ ಹೊಸ ಇತಿಹಾಸ ನಿರ್ಮಾಣವಾಗಿದೆ. ಇ-ಲೋಕ್ ಅದಾಲತ್ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಬಿ. ಹೊಸಮನಿ ಪ್ರಕಟಣೆ ಮೂಲಕ ಧನ್ಯವಾದ ತಿಳಿಸಿದ್ದಾರೆ.