ಕಾರವಾರ : ಕಾರ್ಮಿಕ ದಿನಾಚರಣೆ ದಿನವೇ ನದಿಯಲ್ಲಿ ಮರಳು ತೆಗೆಯಲು ಹೋಗಿ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದ ಕಾರ್ಮಿಕನ ಶವ 24 ಗಂಟೆಗಳ ಬಳಿಕ ಇಂದು ಹೊನ್ನಾವರದ ಕುದ್ರಾಳಬೇಲೆಯ ಶರಾವತಿ ಸೇತುವೆ ಬಳಿ ಪತ್ತೆಯಾಗಿದೆ.
ಓದಿ: ಉಪ ಚುನಾವಣೆಯಲ್ಲಿ ಹಿನ್ನಡೆ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲವೆಂದ ಡಿಸಿಎಂ
ಮಾವಿನಕುರ್ವಾದ ವಿಷ್ಣು ಪದ್ಮಯ್ಯ ಗೌಡ (45) ಮೃತ ದುರ್ದೈವಿ. ಶನಿವಾರ ಮುಂಜಾನೆ ರಮಾಕಾಂತ ಅಂಬಿಗ ಎಂಬುವರ ಬೋಟ್‌ನಲ್ಲಿ ಮರಳು ತೆಗೆಯಲು ತೆರಳಿದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಲ್ಲಿ ಬಿದ್ದು ನಾಪತ್ತೆಯಾಗಿದ್ದ.
ಈತನ ಪತ್ತೆಗಾಗಿ ಪೊಲೀಸರು ಹಾಗೂ ಸ್ಥಳೀಯ ಮರಳು ಕಾರ್ಮಿಕರು ದಿನವಿಡೀ ನೀರಲ್ಲಿ ಶೋಧಕಾರ್ಯ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಆದರೆ, ಇಂದು ನಾಪತ್ತೆಯಾದ ಪ್ರದೇಶದ 2 ಕಿ.ಮೀ ದೂರದ ಶರಾವತಿ ಸೇತುವೆ ಹಾಗೂ ಕೊಂಕಣ ರೈಲ್ವೆ ಸೇತುವೆ ಮದ್ಯದ ಕುದ್ರಾಳಬೇಲೆ ಬಳಿ ಮೃತದೇಹ ಪತ್ತೆಯಾಗಿದೆ.
ಆರು ತಿಂಗಳ ಹಿಂದಷ್ಟೆ ವಿಷ್ಣು ಮದುವೆಯಾಗಿದ್ದ. ಇದೀಗ ಕುಟುಂಬಕ್ಕೆ ಆಧಾರವಾಗಿದ್ದವನನ್ನು ಕಳೆದುಕೊಂಡು ಮನೆ ಮಂದಿ ಕಣ್ಣೀರಿನಲ್ಲಿ ಕಳೆಯುವಂತಾಗಿದೆ.