ಕಾರವಾರ : ಉರುವಲು ಕಟ್ಟಿಗೆ ತರಲು ಕಾಡಿಗೆ ತೆರಳಿದಾಗ ಯಾರೋ ಹೊಡೆದ ಗುಂಡು ತಾಗಿ ಕೈಗೆ ಗಾಯವಾಗಿದೆ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೊಲೀಸರ ಬಳಿಯೇ ಕಥೆ ಕಟ್ಟಿದ್ದ ದಂಪತಿಯಿಂದ ಸತ್ಯ ಬಾಯಿಬಿಡಿಸುವಲ್ಲಿ ಕಾರವಾರ ತಾಲೂಕಿನ ಕದ್ರಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾರವಾರದ ಮಲ್ಲಾಪುರ ಠಾಣಾ ವ್ಯಾಪ್ತಿಯ ಗೋಯರದಲ್ಲಿ ಡಿ.4ರಂದು ಕಾಡಿಗೆ ಕಟ್ಟಿಗೆ ತರಲು ತೆರಳಿದಾಗ ಯಾರೋ ಹೊಡೆದ ಗುಂಡು ಪತ್ನಿಗೆ ತಾಗಿದೆ ಎಂದು ಹೇಳಿ ಆಕೆ ಪತಿ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ. ಕದ್ರಾ ಪೊಲೀಸ್ ಠಾಣೆಯಲ್ಲಿಯೂ ಇದೇ ರಿತಿ ಹೇಳಿ ದೂರು ದಾಖಲಿಸಿದ್ದನು.
ಅದರಂತೆ ಪ್ರಕರಣ ದಾಖಲಿಸಿಕೊಂಡ ಮಲ್ಲಾಪುರ ಪೊಲೀಸ್ ಠಾಣೆ ಪ್ರಭಾರ, ಕದ್ರಾ ಠಾಣೆ ಪಿಎಸ್ ಐ ರಾಜಶೇಖರ್, ಸಾಗನೂರ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ನಿರ್ದೇಶನದಲ್ಲಿ, ಡಿವೈಎಸ್ಪಿ ಅರವಿಂದ್ ಕಲ್ಗುಜ್ಜಿ ಹಾಗೂ ಸಿಪಿಐ ಸಂತೋಷ ಶೆಟ್ಟಿ ಮಾರ್ಗದರ್ಶನದಂತೆ ತನಿಖೆ ಕೈಗೊಂಡು ಘಟನೆ ನಡೆದಿರುವುದಾಗಿ ಹೇಳಿದ ಅರಣ್ಯ ಪ್ರದೇಶದಲ್ಲಿ ಎರಡು ಬಾರಿ ತೆರಳಿ ಜಾಲಾಡಿದ್ದರು. ಆದರೆ, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ಸ್ಥಳೀಯರನ್ನು ವಿಚಾರಿಸಿದಾಗ ಗಂಡ ಹೆಂಡತಿ ನಡುವೆ ಆಗಾಗ ಜಗಳವಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು.
ಅದರಂತೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಆಕೆ ಗಂಡನೇ ಗುಂಡು ಹೊಡೆದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಕೊನೆಗೆ ಪೊಲೀಸರು ಆರೋಪಿ ರಮೇಶ ದೇಸಾಯಿಯನ್ನು ವಿಚಾರಣೆಗೊಳಪಡಿಸಿದಾಗ ತಾನು ಹೆಂಡತಿ ಮೇಲೆ ಸಂಶಯಗೊಂಡು ಮನೆಯಲ್ಲಿದ್ದ ನಾಡ ಬಂದೂಕಿನಿಂದ ಗುಂಡು ಹಾರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೊನೆಗೆ ಆತನನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.