ಶಿರಸಿ: ಜಿಲ್ಲೆಯಲ್ಲಿ ಪ್ರವಾಹದಿಂದ ಸಾಕಷ್ಟು ಕುಗ್ಗಿ ಹೋಗಿರೋ ಅನ್ನದಾತ ಇದೀಗ ಕಾಡು ಪ್ರಾಣಿಗಳ ಹಾವಳಿಯಿಂದ ರೋಸಿ ಹೋಗಿದ್ದಾನೆ. ಎಲ್ಲಿ ನೋಡಿದರೂ ಕಾಡು ಪ್ರಾಣಿಗಳು ತೋಟ, ಗದ್ದೆಗಳಿಗೆ ನುಗ್ಗಿ ಬೆಳೆದ ಬೆಳೆಯನ್ನ ನಾಶ ಮಾಡುತ್ತಿವೆ.
ಕೆಲ ದಿನಗಳ ಹಿಂದೆ ಯಲ್ಲಾಪುರದಲ್ಲಿ ಕಾಡಾನೆಗಳು ದಾಂಧಲೆ ನಡೆಸಿ ಬೆಳೆ ನಾಶ ಮಾಡಿದ್ದವು. ಅದೇ ರೀತಿಯಲ್ಲಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಮಲೆನಾಡಿನ ತಾಲೂಕುಗಳಾದ ಸಿದ್ದಾಪುರ, ಶಿರಸಿ, ಯಲ್ಲಾಪುರ, ದಾಂಡೇಲಿಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರಿದೆ. ಕೋತಿ, ನವಿಲು, ಹಂದಿ, ಆನೆಗಳು ಬೆಳೆದ ಬೆಳೆಯನ್ನೆಲ್ಲಾ ನಾಶಪಡಿಸುತ್ತಿವೆ. ಅದರಲ್ಲೂ ಮಂಗ ಹಾಗೂ ಕಾಡುಹಂದಿಗಳ ಕಾಟವಂತೂ ವಿಪರೀತವಾಗಿದೆ.
ಹಂದಿಗಳು ತೋಟದಲ್ಲಿ ಬೆಳೆದ ಏಲಕ್ಕಿಗೋಸ್ಕರ ಭೂಮಿ ಅಗೆದು ತೋಟವನ್ನ ಹಾಳು ಮಾಡುತ್ತಿದೆ. ಇನ್ನು ಗದ್ದೆಯಲ್ಲಿ ಭತ್ತದ ಬೆಳೆ ಪೈರು ಒಡೆಯುವ ಕಾಲಕ್ಕೆ ಸರಿಯಾಗಿ ನವಿಲು, ಮಂಗಗಳು ಪೈರನ್ನೆಲ್ಲಾ ತಿಂದು ಹಾಕಿ ಗದ್ದೆಯಲ್ಲೇ ಹೊರಳಾಡಿ ಬೆಳೆ ನಾಶ ಮಾಡುತ್ತಿದ್ದು, ರೈತರು ಚಿಂತೆಗೀಡಾಗಿದ್ದಾರೆ.
ಇನ್ನು ಇದಕ್ಕೆಲ್ಲಾ ಸೂಕ್ತ ಪರಿಹಾರ ಕೊಡಬೇಕಿದ್ದ ಅರಣ್ಯ ಇಲಾಖೆ ಮಾತ್ರ ಸುಮ್ಮನೆ ಕುಳಿತಿದೆ. ಪ್ರಾಣಿಗಳನ್ನ ಹೊಡೆಯೋ ಹಾಗೂ ಇಲ್ಲ, ಬಿಡೋ ಹಾಗೂ ಇಲ್ಲ ಅನ್ನೋ ಪರಿಸ್ಥಿತಿ ರೈತರದ್ದಾಗಿದೆ. ಹೀಗಾಗಿ ಈಗಾಗಲೇ ಈ ಸಮಸ್ಯೆಯನ್ನ "ಕೃಷಿ ಪರಿವಾರ ಇಟಗಿ" ಅನ್ನೋ ರೈತರ ಸಮೂಹ ಅರಣ್ಯ ಇಲಾಖೆಯ ಗಮನಕ್ಕೆ ತಂದ್ರೂ ಕೂಡ ಇಲಾಖೆ ಯಾವುದೇ ಕ್ರಮಗಳನ್ನ ಕೈಗೊಳ್ತಾ ಇಲ್ಲ. ಹೀಗಾಗಿ ಇದ್ರಿಂದ ಸಿಟ್ಟಿಗೆದ್ದಿರೋ ಸಿದ್ದಾಪುರ ಇಟಗಿ ಭಾಗದ ರೈತರು, ಅರಣ್ಯ ಇಲಾಖೆ ವಿರುದ್ಧ ಗ್ರಾಮಸಭೆಯಲ್ಲಿ ಪ್ರತಿಭಟನೆ ಮಾಡೋಕೆ ಮುಂದಾಗಿದ್ದಾರೆ. ಅರಣ್ಯ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ಕಾಡು ಪ್ರಾಣಿಗಳ ದಾಂಧಲೆಗೆ ಕಡಿವಾಣ ಹಾಕಬೇಕಾದ ಅಗತ್ಯವಿದೆ.