ಭಟ್ಕಳ (ಉ.ಕ) : ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಗೆ ಮುರುಡೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಯ ತುಂಬೆಲ್ಲಾ ನೀರು ಹರಿಯುತ್ತಿದ್ದು, ವಾಹನ ಸವಾರರು ಸಂಚರಿಸಲು ಪರದಾಡಿದ್ದಲ್ಲದೆ ಸ್ಥಳೀಯ ಪಂಚಾಯತ್‌ಗೆ ಹಿಡಿಶಾಪ ಹಾಕುತ್ತಿದ್ದಾರೆ.
ಕಳೆದ ಎರಡು ದಿನದಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಗೆ ಇಲ್ಲಿನ ರಸ್ತೆಗಳು ನದಿಯಂತಾಗಿದೆ. ಇಲ್ಲಿನ ಮುಖ್ಯ ರಸ್ತೆಯಲ್ಲಿ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಚರಂಡಿಯಿಂದ ರಸ್ತೆಗೆ ನೇರವಾಗಿ ಮಳೆಯ ನೀರು ಹರಿದು ಬರುತ್ತಿದೆ. ಮುರ್ಡೇಶ್ವರದತ್ತ ತೆರಳಲು ಇಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಮಳೆಗಾಲ ಸಮೀಪಿಸುತ್ತಿದ್ದಂತೆ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ, ಚರಂಡಿಯ ಕಾಮಗಾರಿ ಅಪೂರ್ಣ ಮಾಡಿರುವುದರಿಂದ ನೀರು ಏಕಾಏಕಿ ರಸ್ತೆಗೆ ಹರಿದು ಬರುತ್ತಿದೆ.
ಪ್ರತಿವರ್ಷ ಇಲ್ಲಿಯ ಕಾರಿ ಹಳ್ಳದ ಸಮೀಪ ಮಳೆಯಾಗುತ್ತಿದ್ದಂತೆ ಇದೇ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಸ್ಥಳೀಯರಿಗೆ ಮಳೆಗಾಲ ಬಂತೆಂದರೆ ತಲೆನೋವಾಗಿ ಪರಿಣಮಿಸುತ್ತಿದೆ. ಈ ನಡುವೆ ಕಾಮಗಾರಿ ಯಾವಾಗ ಕೊನೆಗೊಳ್ಳುತ್ತದೆ ಎಂದು ಅಧಿಕಾರಿಗಳನ್ನು ಕೇಳಿದ್ರೆ ನೆಪ ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಸ್ಥಳೀಯ ಪಂಚಾಯತ್ ಅಧಿಕಾರಿಗಳು ಮಳೆ ಮುಗಿಯುವ ಹಂತದವರೆಗೆ ತಾತ್ಕಾಲಿಕವಾಗಿ ನೀರು ನಿಲ್ಲದಂತೆ ಏನಾದರೂ ಕ್ರಮಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಬೇಡಿಕೆಯಾಗಿದೆ.