ಭಟ್ಕಳ: ಮತ ಪ್ರಚಾರ ಹಾಗೂ ತಮ್ಮ ಚಟುವಟಿಕೆಗೆ ಹಣ ಸಂಗ್ರಹಕ್ಕಾಗಿ ನಗರಕ್ಕೆ ಬಂದಿದ್ದ ಸುಮಾರು 10 ವಿದೇಶಿಗರನ್ನು ಜಿಲ್ಲಾ ಪೊಲೀಸರು ವೀಸಾ ನಿಯಮ ಉಲ್ಲಂಘನೆ ಅಡಿ ಬಂಧಿಸಿ ಅವರ ದೇಶಗಳಿಗೆ ಮರಳಿ ಕಳುಹಿಸಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರವಾಸಿ ವೀಸಾದಡಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಏಳು ಮಂದಿ, ಕೆನಡಾ, ಸೌದಿ ಅರೇಬಿಯಾದಿಂದ ತಲಾ ಒಬ್ಬರಂತೆ ಸುಮಾರು 10 ಜನ ವಿದೇಶಿಯರು ಭಾರತ ಮೂಲದ ಮೂರು ಜನ ಮುಸ್ಲಿಂ ವ್ಯಕ್ತಿಯೊಂದಿಗೆ ಭಟ್ಕಳಕ್ಕೆ ಮತ ಪ್ರಚಾರ ಹಾಗೂ ಹಣ ಸಂಗ್ರಹಣೆಗೆ ಬಂದಿದ್ದರು. ಈ ಕುರಿತು ಮಾಹಿತಿ ಪಡೆದ ಜಿಲ್ಲಾ ಗುಪ್ತದಳ ವಿಭಾಗ ಹಾಗೂ ಭಟ್ಕಳ ಪೊಲೀಸರು ಅವರ ಚಟುವಟಿಕೆಗಳ ಮೇಲೆ ನಿಗಾ ಇಟ್ಟು ಬಳಿಕ ಅವರನ್ನು ವಶಕ್ಕೆ ಪಡೆದಿದ್ದಾರೆ.
ಭಟ್ಕಳದಲ್ಲಿ ಧರ್ಮ ಪ್ರಚಾರ ಮಾಡುವ ನೆಪದಲ್ಲಿ ಜನರಲ್ಲಿ ಬೇರೆ ಕೋಮಿನ ಬಗ್ಗೆ ದ್ವೇಷ ಭಾವನೆ ಬರುವಂತೆ ಮನ ಪರಿವರ್ತನೆ ಮಾಡುತ್ತಿದ್ದರು. ಇದರ ಜೊತೆಯಲ್ಲಿ ತಮ್ಮ ಕಾರ್ಯಗಳಿಗಾಗಿ ಹಣ ಸಂಗ್ರಹದಲ್ಲಿ ತೊಡಗಿದ್ದರು ಎನ್ನಲಾಗುತ್ತಿದೆ. 10 ವಿದೇಶಿಯರು ಹಾಗೂ 3 ಜನ ಭಾರತೀಯರನ್ನು ವಶಕ್ಕೆ ಪಡೆದ ಪೊಲೀಸರು 10 ಜನ ವಿದೇಶಿಗರನ್ನು (MHA) ಗೃಹ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ್ದು, ಗೃಹ ಇಲಾಖೆ ವಿಸಾ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ವೀಸಾ ರದ್ದುಪಡಿಸಿ ದೇಶದಿಂದ ಹೊರ ಹಾಕಿದೆ. ಇನ್ನು ಉಳಿದ ಭಾರತದ ಮೂವರ ಕುರಿತು ಗುಪ್ತದಳ ಇಲಾಖೆ ಮಾಹಿತಿ ಕಲೆ ಹಾಕುತಿದ್ದು, ಹೆಚ್ಚಿನ ವಿವರ ಲಭ್ಯವಾಗಬೇಕಿದೆ.
ಈ ವಿದೇಶಿಗರು ಈ ಹಿಂದೆಯೂ ಭಾರತಕ್ಕೆ ಬಂದಿದ್ದರು ಎನ್ನಲಾಗಿದ್ದು, ಇದೇ ಮೊದಲ ಬಾರಿಗೆ ಭಟ್ಕಳವನ್ನ ಕೇಂದ್ರವಾಗಿರಿಸಿಕೊಂಡು ಬಂದಿರುಹುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.