ಕಾರವಾರ (ಉ.ಕ): ಕೆಲವು ದಿನಗಳ ಹಿಂದೆ ಅಬ್ಬರಿಸಿದ್ದ ಮಳೆ ಸದ್ಯ ತಣ್ಣಗಾಗಿದೆ. ಆದರೆ, ಮಳೆಯ ಆರ್ಭಟಕ್ಕೆ ರಾಜ್ಯ ಹೆದ್ದಾರಿಯಲ್ಲಿ ಉಂಟಾಗಿರುವ ಹಾನಿ ಜನಸಾಮಾನ್ಯರ ಬದುಕಿಗೆ ಕಂಟಕವಾಗಿದೆ.
ನಿತ್ಯ ಉದ್ಯೋಗ, ಕಚೇರಿ, ಪೇಟೆ.. ಹೀಗೆ ಹತ್ತಾರು ಕಾರಣದಿಂದಾಗಿ ಜಿಲ್ಲಾ ಕೇಂದ್ರವನ್ನು ಸಂಪರ್ಕಿಸುತ್ತಿದ್ದವರಿಗೆ ಇದೀಗ ಓಡಾಟಕ್ಕೂ ಕಾಲುದಾರಿಯೂ ಇಲ್ಲ. ನಿತ್ಯ ನೂರಾರು ಕಿ.ಮೀ ಸುತ್ತಿ ಬಳಸಿ ಓಡಾಡಬೇಕಾದ ಸ್ಥಿತಿ ಇದೆ.
ಕಾರವಾರದಿಂದ ಬೆಳಗಾವಿ ಸಂಪರ್ಕಿಸುವ ಸದಾಶಿವಗಡ-ಔರಾದ್ ರಾಜ್ಯ ಹೆದ್ದಾರಿಯ ಜೊಯಿಡಾ ತಾಲೂಕಿನ ಅಣಶಿ ಘಟ್ಟದಲ್ಲಿ ಗುಡ್ಡ ಕುಸಿತವಾಗಿತ್ತು. ಈ ಪ್ರದೇಶದಲ್ಲಿ ಮಳೆ ನಿಂತರೂ ಗುಡ್ಡ ಕುಸಿತದ ಪರಿಣಾಮ ಸಂಪರ್ಕ ಕಡಿತಗೊಂಡಿದೆ. ಕಾರವಾರ ಸಂಪರ್ಕಿಸುತ್ತಿದ್ದ ಮೂರು ಹಳ್ಳಿಗಳ ಸಂಪರ್ಕ ಕಡಿತವಾಗಿದ್ದು, ನರಕಯಾತನೆ ಅನುಭವಿಸುವಂತಾಗಿದೆ. ಈ ಗುಡ್ಡ ಕುಸಿತ ಎಷ್ಟು ಭೀಕರವಾಗಿದೆ ಎಂದರೆ ಮಣ್ಣು ತೆರವು ಮಾಡುವುದಿರಲಿ, ಮತ್ತೆ ಈ ಮಾರ್ಗ ಬಳಸಲು ಯೋಗ್ಯವಾಗುವುದೇ ಅನುಮಾನ ಎನ್ನುವಂತಾಗಿದೆ.
ನಿತ್ಯದ ಬದುಕಾಯ್ತು ನರಕ
ಇದರಿಂದ ಈ ಭಾಗದ ಜನರು ಅನಿವಾರ್ಯವಾಗಿ ಯಲ್ಲಾಪುರ-ಅಂಕೋಲಾ ಮೂಲಕ 180 ಕಿ.ಮೀ ಸುತ್ತಿ ಕಾರವಾರ ಸಂಪರ್ಕಿಸಬೇಕಾಗಿದೆ. ಜೊಯಿಡಾದಲ್ಲಿ ಮನೆ ಮಾಡಿಕೊಂಡು ಅದೆಷ್ಟೊ ಮಂದಿ ಕದ್ರಾದ ಕೆಪಿಸಿಯಲ್ಲಿ ಉದ್ಯೋಗ ಮಾಡುತ್ತಿದ್ದು, ಕೆಲವರು ಖಾಸಗಿ ಕಂಪನಿಗಳಿಗೆ, ಶಾಲೆಗಳಿಗೆ, ಮಾರುಕಟ್ಟೆಗೆ ಹೀಗೆ ಹತ್ತಾರು ಕಾರಣಕ್ಕೆ ಇದೇ ಮಾರ್ಗ ಅವಲಂಭಿಸಿದ್ದರು. ಆದರೆ ಈಗ ಇದ್ದೊಂದು ಮಾರ್ಗ ಬಂದ್ ಆಗಿದ್ದು, ನಿತ್ಯದ ಬದುಕು ಏರುಪೇರಾಗಿದೆ.
ಈ ಕುರಿತಂತೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಶಿವರಾಮ್ ಹೆಬ್ಬಾರ್ ಕೂಡ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದು, ಸದ್ಯ ಹೆದ್ದಾರಿ ನಿರ್ಮಾಣ ಸಾಧ್ಯವೇ ಇಲ್ಲದ ಕಾರಣ ಈ ಮೂರು ಹಳ್ಳಿಗಳಿಗೆ ವಾರದಲ್ಲಿ ಒಂದು ಇಲ್ಲವೇ ಎರಡು ದಿನ ಜಿಲ್ಲಾಧಿಕಾರಿ ಸೇರಿ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಆಲಿಸಬೇಕು ಎಂಬ ಸೂಚನೆ ನೀಡಿದ್ದಾರೆ.