ಶಿರಸಿ : ಉತ್ತರ ಕನ್ನಡದ ವರದಾ ನದಿ ಪ್ರವಾಹ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ನದಿ ಪಾತ್ರದ ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಕ್ಷಣಕ್ಷಣಕ್ಕೂ ಮನೆಗಳು, ಜಮೀನುಗಳು ಜಲಾವೃತವಾಗುತ್ತಿದೆ. ಪ್ರವಾಹದ ಪರಿಸ್ಥಿತಿ ಬಿಗಡಾಯಿಸುತ್ತಿರುವ ಪರಿಣಾಮ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬನವಾಸಿ ಹೋಬಳಿಯ ಜೀವ ನದಿಯಾದ ವರದೆ ಮುನಿಸಿಕೊಂಡಂತೆ ಪ್ರವಾಹ ಹೆಚ್ಚಿಸಿಕೊಂಡಿದೆ. ನದಿಯಂಚಿನ ಸುಮಾರು 4-5 ಸಾವಿರ ಎಕರೆಯಷ್ಟು ಕೃಷಿ ಭೂಮಿ ಜಲಾವೃತ್ತವಾಗಿದ್ದು, ಆಸುಪಾಸಿನ ಸೊರಬ ತಾಲೂಕಿನ ಗ್ರಾಮಗಳಿಗೂ ಸಹ ನೀರು ನುಗ್ಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾಶಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೊಗಳ್ಳಿ, ಸಣ್ಣಮನೆ, ಅಜ್ಜರಣಿ, ತಿಗಣಿ, ಲಿಂಗನಕೊಪ್ಪ ಹಾಗೂ ಹೊಸ್ಕೇರಿ, ನರೂರ ಭಾಗದ ಕೃಷಿ ಭೂಮಿ ಕಳೆದ ವಾರದಿಂದ ನೀರಿನಲ್ಲಿ ಮುಳುಗಿದೆ.
ಬನವಾಸಿ ಸಮೀಪದ ಅಜ್ಜರಣಿ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಅದೇ ರೀತಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಸಂಪರ್ಕವಿಲ್ಲದೇ ಜನ ಪರದಾಡುತ್ತಿದ್ದಾರೆ. ಭತ್ತ, ಅನಾನಸ್, ಅಡಿಕೆ, ಬಾಳೆ ಮತ್ತು ಶುಂಠಿ ಬೆಳೆಗಳು ವರದಾನದಿಯ ಪ್ರವಾಹಕ್ಕೆ ತುತ್ತಾಗಿದೆ. ಮಳೆಯ ತೀವ್ರತೆ ಮುಂದುವರೆದಿರುವ ಹಿನ್ನೆಲೆಯಲ್ಲಿ ನದಿ ತಟದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರವಾಹಪೀಡಿತ ಪ್ರದೇಶಕ್ಕೆ ಯಲ್ಲಾಪುರ ಕ್ಷೇತ್ರದ ಅನರ್ಹ ಶಾಸಕ ಶಿವರಾಮ ಹೆಬ್ಬಾರ ತೆರಳಿ ಪರಿಸ್ಥಿತಿ ಪರಿಶೀಲಿಸಿ ಗ್ರಾಮಸ್ಥರ ಸಮಸ್ಯೆ ಆಲಿಸಿದ್ದಾರೆ.
ಈಗಾಗಲೇ ಇಡೀ ಜಮೀನು ಜಲಾವೃತ್ತವಾಗಿ ವಾರ ಕಳೆದಿವೆ. ಇನ್ನು ಮೂರ್ನಾಲ್ಕು ದಿನ ಇದೇ ರೀತಿ ಪ್ರವಾಹ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದ್ದು, ಸಾಕಪ್ಪಾ ಮಳೆಯ ಸಹವಾಸ ಅಂತಿದ್ದಾರೆ ವರದೆಯಂಚಿನ ಗ್ರಾಮಗಳ ಜನತೆ.