ಕಾರವಾರ: ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಜನರ ಬೇಡಿಕೆಯನ್ನು ಈಡೇರಿಸುವುದಾಗಿ ಮುಖ್ಯಮಂತ್ರಿಗಳು ಕಳೆದ ತಿಂಗಳು ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳು ಚಿಕಿತ್ಸೆಗೆಂದು ಉಡುಪಿ ಆಸ್ಪತ್ರೆಗೆ ಅಂಬ್ಯುಲೆನ್ಸ್‌ನಲ್ಲಿ ತೆರಳುತ್ತಿದ್ದಾಗ ಅಪಘಾತದಲ್ಲಿ ಹೊನ್ನಾವರ ಮೂಲದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು. ಇದಾದ ಬಳಿಕ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕೂಗು ಜೋರಾಗಿ ಟ್ವಿಟರ್ ಅಭಿಯಾನ, ರಕ್ತಪತ್ರ ಚಳುವಳಿ, ಬೃಹತ್ ಪ್ರತಿಭಟನೆ ಸೇರಿದಂತೆ ವಿವಿಧ ರೀತಿಯಲ್ಲಿ ಜನರು ಹೋರಾಟ ನಡೆಸಿದ್ದರು.
ಪ್ರತಿಭಟನೆಯ ಮಾಹಿತಿ ಪಡೆದ ಮುಖ್ಯಮಂತ್ರಿ ಬೊಮ್ಮಾಯಿ ಜಿಲ್ಲೆಗೆ ಭೇಟಿ ನೀಡಿ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಪರಿಶೀಲಿಸಿ ಜನರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದ್ರೆ ಸಿಎಂ ಹೇಳಿಕೆ ನೀಡಿ ತಿಂಗಳು ಕಳೆಯುತ್ತಾ ಬಂದರೂ ಸಹ ಭರವಸೆ ಈಡೇರುವ ಲಕ್ಷಣಗಳು ಮಾತ್ರ ಕಂಡುಬಂದಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕಾರವಾರ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದು ಅಭಿಯಾನ