ಕಾರವಾರ (ಉತ್ತರಕನ್ನಡ): ಉತ್ತರಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಆರ್ಭಟ ಶುರುವಾಗಿದೆ. ಈ ವರ್ಷದ ಮೊದಲ ಪ್ರಕರಣ ಸಿದ್ದಾಪುರ ತಾಲೂಕಿನಲ್ಲಿ ದೃಢಪಟ್ಟಿದ್ದಲ್ಲದೇ, ಮೊದಲ ಸಾವಿನ ಪ್ರಕರಣ ಕೂಡ ಸಿದ್ದಾಪುರದಲ್ಲೇ ವರದಿಯಾಗಿದೆ. ಈವರೆಗೆ ಎಂಟು ಪ್ರಕರಣಗಳು ಪತ್ತೆಯಾಗಿವೆ.
ಸೊರಬ ತಾಲೂಕಿನ ಕ್ಯಾಸನೂರು ಅರಣ್ಯದಲ್ಲಿ 1957ರಲ್ಲಿ ಮೊದಲ ಬಾರಿಗೆ ಮಂಗನ ಕಾಯಿಲೆ ಪ್ರಕರಣ ಪತ್ತೆಯಾಗಿ, ಈವರೆಗೆ ಸಾವಿರಾರು ಮಂದಿ ಈ ರೋಗಕ್ಕೆ ತುತ್ತಾಗಿದ್ದಾರೆ. ಪ್ರತಿ ವರ್ಷವೂ ಮಲೆನಾಡಿನಲ್ಲಿ ಈ ಕಾಯಿಲೆಗೆ ಜನರು ಬಲಿಯಾಗುತ್ತಿದ್ದಾರೆ. ಒಂದು ವರ್ಷದ ಹಿಂದೆ ಸಿದ್ದಾಪುರದಲ್ಲಿ ಒಂದು ಸಾವು ಸಂಭವಿಸಿ, ಪ್ರಕರಣಗಳು ನಿಯಂತ್ರಣಕ್ಕೆ ಬಂದಿತ್ತು. ಆದರೆ ಅದಕ್ಕೂ ಮೊದಲ ವರ್ಷ 63 ಜನರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿತ್ತು. ಆ ಪೈಕಿ 13 ಜನರು ಮೃತಪಟ್ಟಿದ್ದಾರೆ.
ಈ ವರ್ಷ ಸಿದ್ದಾಪುರ ಮತ್ತು ಹೊನ್ನಾವರದಲ್ಲಿ ಒಟ್ಟು ಎಂಟು ಪ್ರಕರಣಗಳು ಪತ್ತೆಯಾಗಿದ್ದು, ಸಿದ್ದಾಪುರ ಮೂಲದ ವೃದ್ಧೆಯೊಬ್ಬರು ಶಿವಮೊಗ್ಗದ ಮೆಗ್ಗಾನ್ನಲ್ಲಿ ಮೃತಪಟ್ಟಿರುವುದು ಮತ್ತೆ ಆತಂಕ ತಂದೊಡ್ಡಿದೆ.
ಇದನ್ನೂ ಓದಿ: ದೆಹಲಿಗೆ ಹೋಗ್ತೀನಿ ಆದ್ರೆ ಹೈಕಮಾಂಡ್ ಭೇಟಿಗೆ ಸಮಯಾವಕಾಶ ಕೋರಿಲ್ಲ: ಸಿಎಂ ಸ್ಪಷ್ಟನೆ
ಕಳೆದ ಐದು ದಶಕಗಳಿಂದ ಮಂಗನ ಕಾಯಿಲೆ ಜನರ ಜೀವವನ್ನು ಹಿಂಡುತ್ತಿದೆ. ಆದರೆ, ಕಾಯಿಲೆ ಉಲ್ಭಣಗೊಂಡಾಗ, ಯಾರಾದರು ಮೃತಪಟ್ಟಾಗ ಮಾತ್ರ ಆಡಳಿತ ವ್ಯವಸ್ಥೆ ಕೆಲಸ ಮಾಡುತ್ತೆ. ಅದಕ್ಕೂ ಮುನ್ನ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳುವುದಿಲ್ಲ ಎನ್ನುವ ಆರೋಪವಿದೆ. ಅಲ್ಲದೇ ಮಂಗನ ಕಾಯಿಲೆಗೊಂದು ಶಾಶ್ವತ ಪರಿಹಾರ ಬೇಕಿದೆ ಎನ್ನುವ ಕೂಗು ಕೇಳಿ ಬರುತ್ತಿದೆ.