ಕಾರವಾರ: ಉತ್ತರಕನ್ನಡದಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಆರಂಭವಾಗಿ 8 ವರ್ಷಗಳೇ ಕಳೆದಿವೆ. ಆದರೆ ಚತುಷ್ಪಥ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳೇ ಕಾಣುತ್ತಿಲ್ಲ. ಅದರಲ್ಲೂ ಜಿಲ್ಲಾ ಕೇಂದ್ರ ಕಾರವಾರ ವ್ಯಾಪ್ತಿಯಲ್ಲೇ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ವಾಹನ ಸವಾರರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹಾಲಿ ಸರ್ಕಾರದ ಶಾಸಕರೇ ಇದೀಗ ಕಾಮಗಾರಿ ನಡೆಸುತ್ತಿರುವ ಕಂಪನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಐಆರ್‌ಬಿ ಕಂಪೆನಿ ವಿರುದ್ಧ ಆಕ್ರೋಶ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರವಾರದಿಂದ ಭಟ್ಕಳಕ್ಕೆ ತೆರಳಬೇಕು ಅಂದ್ರೆ ವಾಹನ ಸವಾರರು ಎಚ್ಚರ ವಹಿಸಬೇಕು. ಕಾರವಾರ ಗಡಿ ಮಾಜಾಳಿಯಿಂದ ಭಟ್ಕಳ ಗಡಿಯವರೆಗಿನ ಸುಮಾರು 157 ಕಿ.ಮೀ ಹೆದ್ದಾರಿಯನ್ನು ಚತುಷ್ಪಥಕ್ಕೇರಿಸುವ ಕಾಮಗಾರಿ ಕಳೆದ 8 ವರ್ಷಗಳಿಂದ ನಡೆಯುತ್ತಿದೆ. ಇಲ್ಲಿ ಆಗುತ್ತಿರುವ ಅವಘಡಗಳು ಒಂದೆರಡಲ್ಲ. ಹೀಗಾಗಿ ಇದೀಗ ಜನಪ್ರತಿನಿಧಿಗಳು ಸಹ ಹೆದ್ದಾರಿ ಅಗಲೀಕರಣ ಕೈಗೊಂಡಿರುವ ಐಆರ್‌ಬಿ ಕಂಪನಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಕಾಮಗಾರಿ ಅಪೂರ್ಣ: ಶೇ.75 ರಷ್ಟು ರಸ್ತೆ ಕಾಮಗಾರಿ ಪೂರ್ಣಗೊಂಡಿರುವುದಾಗಿ ಹೇಳಿ ಟೋಲ್ ಅನ್ನು ಸಹ ಪ್ರಾರಂಭಿಸಿದೆ. ಆದ್ರೆ ವಾಸ್ತವದಲ್ಲಿ ನೋಡೋದಾದ್ರೆ ಹೆದ್ದಾರಿ ಶೇ.70ರಷ್ಟೂ ಸಹ ಪೂರ್ಣಗೊಂಡಿಲ್ಲ. ಕೆಲವೆಡೆ ಕೇವಲ ರಸ್ತೆಯನ್ನಷ್ಟೇ ನಿರ್ಮಿಸಿ ಕಾಲುವೆ ನಿರ್ಮಿಸದೇ ಬಿಡಲಾಗಿದೆ. ಹೀಗಾಗಿ ಕಾರವಾರ ತಾಲೂಕಿನ ಹೆದ್ದಾರಿಯಂಚಿನ ಗ್ರಾಮಗಳಲ್ಲಿ ಮಳೆ ನೀರು ಹರಿದುಹೋಗದೇ ನೆರೆ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ರೂಪಾಲಿ ನಾಯ್ಕ ಅಸಮಧಾನ: ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಸಹ ಹೆದ್ದಾರಿ ಕಾಮಗಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೋಲ್ ಸಂಗ್ರಹಿಸುವ ನಿಟ್ಟಿನಲ್ಲಿ ಅಲ್ಲಲ್ಲಿ ಕೇವಲ ರಸ್ತೆಯನ್ನಷ್ಟೇ ನಿರ್ಮಿಸಿ ಕಾಮಗಾರಿ ಮುಕ್ಕಾಲು ಭಾಗ ಪೂರ್ಣಗೊಂಡಿದ್ದಾಗಿ ಕಂಪನಿಯವರು ಹೇಳಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆರೆ ಪರಿಸ್ಥಿತಿ ನಿರ್ಮಾಣ: ಕಾರವಾರ ತಾಲೂಕಿನ ಅರಗಾ, ಚೆಂಡಿಯಾ ಭಾಗದಲ್ಲಿ ಹೆದ್ದಾರಿಗೆ ಕಾಲುವೆ ನಿರ್ಮಿಸದ ಪರಿಣಾಮ ಮಳೆಯ ನೀರು ಜನವಸತಿ ಪ್ರದೇಶಗಳಲ್ಲಿ ಸಂಗ್ರಹವಾಗಿ ನೆರೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಶಾಸಕರು, ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿ ನೀರು ಹರಿದುಹೋಗಲು ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು.
ಇದನ್ನೂ ಓದಿ: 75 ಎಲೆಕ್ಟ್ರಿಕ್ ಬಸ್ಗಳ ಸಂಚಾರಕ್ಕೆ ಸಿಎಂ ಬೊಮ್ಮಾಯಿ ಹಸಿರು ನಿಶಾನೆ
ಅಲ್ಲದೇ ಈ ಸಂಬಂಧ ಸಂಸದ ಅನಂತಕುಮಾರ ಹೆಗಡೆ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸಭೆ ನಡೆಸಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದು, ಸೂಕ್ತ ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆ ಹೆದ್ದಾರಿ ಕಾಮಗಾರಿಯಿಂದ ಅಪಘಾತಗಳು ಹೆಚ್ಚಾಗಿರುವ ಕುರಿತು ಸಮೀಕ್ಷೆ ನಡೆಸಿದ್ದು, ಸುಮಾರು 70 ಬ್ಲ್ಯಾಕ್ ಸ್ಪಾಟ್‌ಗಳನ್ನ ಗುರುತಿಸಿದ್ದರು. ಇದು ಹೆದ್ದಾರಿಯಲ್ಲಿನ ನ್ಯೂನ್ಯತೆಗಳನ್ನು ಎತ್ತಿ ತೋರಿಸುವಂತಿದ್ದು, ಈ ನಿಟ್ಟಿನಲ್ಲಿ ತಿಂಗಳೊಳಗೆ ಈ ಸಮಸ್ಯೆಯನ್ನು ಪರಿಹರಿಸುವಂತೆ ಗಡುವು ನೀಡಲಾಗಿದೆ. ಒಟ್ಟಾರೆ ಕಾಮಗಾರಿ ಪೂರ್ಣಗೊಳ್ಳುವವರೆಗೂ ಸಮಸ್ಯೆ ತಪ್ಪಿದ್ದಲ್ಲ.