ಕಾರವಾರ/ಉತ್ತರ ಕನ್ನಡ: ಭಟ್ಕಳದಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಆರೋಗ್ಯದಲ್ಲಿ ಏರುಪೇರಾದ ಕಾರಣ ಇಬ್ಬರು ವೈದ್ಯರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಟ್ಕಳದಲ್ಲಿ ಮಂಗಳವಾರ ಇಬ್ಬರಿಗೆ ಕೊರೊನೊ ಸೋಂಕು ದೃಢಪಟ್ಟಿದೆ. ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಕೊರೊನಾ ಶಂಕಿತರ ಗಂಟಲು ದ್ರವ ಪರೀಕ್ಷೆ ಮಾಡುತ್ತಿದ್ದ ಇಬ್ಬರು ವೈದ್ಯರಲ್ಲೂ ಜ್ವರದ ಲಕ್ಷಣ ಕಾಣಿಸಿಕೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಇಬ್ಬರೂ ವೈದ್ಯರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ, ಯಾರೂ ಗಾಬರಿಗೊಳಗಾಗುವ ಅಗತ್ಯ ಇಲ್ಲ ಎಂದರು. ವೈದ್ಯರು ನಿರಂತರವಾಗಿ ಕೊರೊನಾ ಸೋಂಕಿತರ ಸಂಪರ್ಕದಲ್ಲಿರುವ ಕಾರಣ ಪರೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಿದರು.
ಇನ್ನು, ಭಟ್ಕಳದಲ್ಲಿ ದೃಢಪಟ್ಟಿರುವ ಇಬ್ಬರು ಸೋಂಕಿತರ ಟ್ರಾವೆಲ್ ಹಿಸ್ಟರಿಯ ಮಾಹಿತಿ ಪಡೆದು ಅವರ ಸಂಪರ್ಕಕ್ಕೆ ಬಂದವರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅಲ್ಲದೆ ಇವರಿಗೆ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಈಗಾಗಲೇ 40 ವರ್ಷದ ಸೋಂಕಿತ ವ್ಯಕ್ತಿ ಮಾಹಿತಿ ನೀಡಿದ್ದು, ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲಾಗುತ್ತಿದೆ. ಉಳಿದಂತೆ ಇನ್ನೋರ್ವ 65 ವರ್ಷದವರು ತಮ್ಮ ಓಡಾಟ ಹಾಗೂ ಸಂಪರ್ಕಕ್ಕೆ ಬಂದವರನ್ನು ಮರೆತಿದ್ದು, ಸ್ವಲ್ಪ ಗಾಬರಿಗೊಂಡಿದ್ದಾರೆ. ಅವರಿಂದ ಮತ್ತೊಮ್ಮೆ ಮಾಹಿತಿ ಪಡೆದು ರೈಲು, ಆಟೋ ಹಾಗೂ ಸಂಪರ್ಕಕ್ಕೆ ಬಂದವರ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ರು.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 27 ಜನರ ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಅದರಲ್ಲಿ 25 ಪ್ರಕರಣಗಳ ವರದಿ ಬಂದಿದ್ದು ಎರಡು ಮಾತ್ರ ಸೋಂಕು ಇರುವುದು ದೃಢಪಟ್ಟಿದೆ. ಉಳಿದಂತೆ ಇನ್ನಿಬ್ಬರ ವರದಿ ಬರುವುದು ಬಾಕಿ ಇದೆ. ಜನರು 21 ದಿನಗಳ ಕಾಲ ಯಾವುದೇ ಕಾರಣಕ್ಕೂ ಹೊರಬರಬಾರದು. ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಲಿದೆ ಎಂದು ಡಿಸಿ ಮಾಹಿತಿ ನೀಡಿದರು.