ಭಟ್ಕಳ : ತಾಲೂಕಿನ ಕುಕ್ನೀರ ಸಮೀಪದ ವೆಂಕಟಾಪುರ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿರುವ ಘಟನೆ ಬುಧವಾರ ನಡೆದಿದೆ. ಅಂದಾಜು 60 ವರ್ಷದ ಆಸುಪಾಸಿನ ವ್ಯಕ್ತಿಯ ಶವ ಇದಾಗಿದ್ದು ಸ್ಥಳದಲ್ಲಿ ಬಟ್ಟೆ ಮತ್ತು ಚಪ್ಪಲಿ ಪತ್ತೆಯಾಗಿವೆ.
ಪತ್ತೆಯಾದ ಶರ್ಟ್ ಹಿಂಬದಿಯಲ್ಲಿ ಬೆಂಗಳೂರು ಮೂಲದ ಟೈಲರ್ ಶಾಪ್ ಮೊಬೈಲ್ ನಂಬರ್ ಮತ್ತು ವಿಳಾಸವಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಓಂಕಾರಪ್ಪ ಹಾಗೂ ಸಿಬ್ಬಂದಿ ಮಲ್ಲಿಕಾರ್ಜುನ್ ಅವರು ಎಸ್ಡಿಪಿಐ ಸದಸ್ಯರ ಸಹಾಯದಿಂದ ಮೃತ ದೇಹವನ್ನು ನದಿಯಿಂದ ಮೇಲಕ್ಕೆತ್ತಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಬೆಂಗಳೂರು ಮೂಲದ ವ್ಯಕ್ತಿ ಎಂಬ ಶಂಕೆ :
ಬೆಂಗಳೂರಿನ ಅಂಚೆ ಪಾಳ್ಯ ಮೂಲದ ವ್ಯಕ್ತಿಯೋರ್ವ ಕೆಲದಿನಗಳ ಹಿಂದೆ ನಾಪತ್ತೆಯಾದ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಭಟ್ಕಳದಲ್ಲಿ ಸಿಕ್ಕಿರುವ ಮೃತನ ಬಟ್ಟೆಯ ಮೇಲೆ ಬೆಂಗಳೂರಿನ ವಿಳಾಸ ಇರುವುದರಿಂದ ಮೃತ ವ್ಯಕ್ತಿಯ ಫೋಟೋವನ್ನು ಬೆಂಗಳೂರಿನ ಅಂಚೆ ಪಾಳ್ಯದಲ್ಲಿ ನಾಪತ್ತೆಯಾಗಿರುವ ಸಂಬಂಧಿಕರಿಗೆ ಕಳುಹಿಸಿಕೊಡಲಾಗಿದೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.