ಕಾರವಾರ: ಗೋವಾದಿಂದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5.25 ಲಕ್ಷ ನಗದನ್ನು ಕಾರವಾರದ ಮಾಜಾಳ ಚೆಕ್ ಪೋಸ್ಟ್ ಬಳಿ ಚಿತ್ತಾಕುಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋವಾದಿಂದ ಕಾರವಾರ ಕಡೆ ತೆರಳುತ್ತಿದ್ದ ಕಾರನ್ನು ಕದ್ರಾ ಸಿಪಿಐ ಗೋವಿಂದರಾಜ ದಾಸರಿ, ಕದ್ರಾ ಪಿಎಸ್ಐಗಳಾದ ಉದ್ದಪ್ಪ ಅಶೋಕ ಧರೆಪ್ಪನವರ, ರವೀಂದ್ರ ಬಿರಾದಾರ, ಸಿಬ್ಬಂದಿಗಳಾದ ಮುಕುಂದ ನಾಯ್ಕ, ಸಂತೋಷ ಉರ್ಮಿ, ರಾಧಾ ಗೌಡ, ಸುರೇಶ ಹಾರಗೊಪ್ಪ ಹಾಗೂ ಜಿಲ್ಲಾ ಸಂಕ್ಯಾ ಸಂಗ್ರಹಣ ಅಧಿಕಾರ ಕಚೇರಿ ಅಧಿಕಾರಿಗಳ ಸಮ್ಮುಖದಲ್ಲಿ ಜಂಟಿಯಾಗಿ ತಪಾಸಣೆ ನಡೆಸಿದಾಗ ಯಾವುದೇ ಅಧಿಕೃತ ದಾಖಲೆ ಇಲ್ಲದೇ 5 ಲಕ್ಷ 25 ಸಾವಿರ ನಗದು ಸಾಗಿಸುತ್ತಿರುವುದು ಪತ್ತೆಯಾಗಿದೆ.
ಗೋವಾ ಕಾಣಕೋಣದ ಭಗತವಾಡದ ಸತ್ಯೇಂದ್ರ ಭಗತ ಎಂಬುವವರು ಈ ಹಣವನ್ನು ಸಾಗಿಸುತ್ತಿದ್ದರು. ದಾಖಲೆ ಇಲ್ಲದ ಕಾರಣ ನಗದು ಹಣ ಹಾಗೂ ಹಣ ಸಾಗಣೆಗೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮದ್ಯ ವಶಕ್ಕೆ: ಕ್ರೂಜರ್ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವೇಳೆ ಅಬಕಾರಿ ಅಧಿಕಾರಿಗಳು ಹಾಗೂ ರಾಜ್ಯ ವಿಚಕ್ಷಣ ದಳ ದಾಳಿ ನಡೆಸಿ ಸುಮಾರು 15.52 ಲಕ್ಷ ಮೌಲ್ಯದ ಜೊತೆ ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಜಿಲ್ಲೆಯ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಬುಧವಾರ ನಡೆದಿದೆ. ಆಂಧ್ರಪ್ರದೇಶದ ಮೇದಕ್ ಜಿಲ್ಲೆಯ ಬಗೀಲಿ ಅಜಯ ಗೌಡ ಬಂಧಿತ ಆರೋಪಿತ. ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾದ ಹಿನ್ನೆಲೆ ರಾಜ್ಯದ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದೆ. ಅದರಂತೆ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಹಾಗೂ ವಿಚಕ್ಷಣ ದಳದ ಸಿಬ್ಬಂದಿ ವಾಹನಗಳನ್ನ ಪರಿಶೀಲನೆ ನಡೆಸುತ್ತಿದ್ದ ವೇಳೆ ಆಂಧ್ರಪ್ರದೇಶ ಮೂಲದ ಕ್ರೂಜರ್ ವಾಹನದಲ್ಲಿ ಅಕ್ರಮ ಗೋವಾ ಮದ್ಯ ಪತ್ತೆಯಾಗಿದೆ.
ಸುಮಾರು 17.5 ಲೀಟರ್ ಗೋವಾ ಮದ್ಯ, 3.75 ಲೀಟರ್ ಗೋವಾ ಫೆನ್ನಿ ಹಾಗೂ 3.75 ಲೀಟರ್ ಗೋವಾ ವೈನ್ ಪತ್ತೆಯಾಗಿದ್ದು ಇವುಗಳ ಅಂದಾಜು ಮೌಲ್ಯ 52 ಸಾವಿರ ರೂಪಾಯಿ ಆಗಿದೆ. ಈ ವೇಳೆ ಅಕ್ರಮ ಮದ್ಯ ಸಾಗಣೆಗೆ ಬಳಕೆ ಮಾಡಲಾದ 15 ಲಕ್ಷ ಮೌಲ್ಯದ ಕ್ರೂಜರ್ ವಾಹನ ಸೇರಿ ಒಟ್ಟು 15.52 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ. ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮವಾಗಿ ಜಾನುವಾರು ಸಾಗಾಟ; ಮೂವರ ವಿರುದ್ಧ ಪ್ರಕರಣ ದಾಖಲು.. ಯಾವುದೇ ಪಾಸ್ ಪರ್ಮಿಟ್ ಹೊಂದಿರದೇ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಹೊನ್ನಾವರ ತಾಲೂಕಿನ ಹಳದಿಪುರದ ರಾಷ್ಟ್ರೀಯ ಹೆದ್ದಾರಿ 66ರ ಅಗ್ರಹಾರ ಗಣಪತಿ ದೇವಸ್ಥಾನ ಎದುರಿಗೆ ನಡೆದಿದೆ. ಬೈಂದೂರ ಕಡೆಯಿಂದ ಪೂನಾ ಕಡೆಗೆ ಜಾನುವಾರು ಸಾಗಿಸುತ್ತಿದ್ದರು. ಸರಿಯಾದ ಗಾಳಿ ಬೆಳಕು ಇರುವ ಕಂಪಾರ್ಟ್ಮೆಂಟಿನ ವ್ಯವಸ್ಥೆ ಮಾಡದೆ ಹಾಗೂ ಜಾನುವಾರುಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡದೇ, ಹಿಂಸಾತ್ಮಕವಾಗಿ ತುಂಬಿಕೊಂಡು ಜಾನುವಾರುಗಳನ್ನು ವಧೆ ಮಾಡುವ ಉದ್ದೇಶಕ್ಕೆ ಲಾರಿಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಎರಡು ಪ್ರತ್ಯೇಕ ಅಕ್ರಮ ಹಣ ಸಾಗಣೆ ಪ್ರಕರಣದಲ್ಲಿ 72 ಲಕ್ಷ ರೂ. ಪೊಲೀಸರ ವಶಕ್ಕೆ