ಶಿರಸಿ (ಉತ್ತರ ಕನ್ನಡ) : ಜಿಲ್ಲೆಯ ಕಾರವಾರದಲ್ಲಿ ಶನಿವಾರ ಪತ್ತೆಯಾದ ಕೊರೊನಾ ಸೋಂಕಿತನ ಟ್ರಾವೆಲ್ ಹಿಸ್ಟರಿ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದು, ಸೋಂಕಿತನಿಗೂ ಶಿರಸಿಗೂ ಸಂಬಂಧವಿರುವ ಕಾರಣ ಇಲ್ಲಿನ ಜನರಲ್ಲಿ ಭೀತಿ ಹೆಚ್ಚಾಗಿದೆ.
ಇಲ್ಲಿನ ಮುಸ್ಲಿಂ ಗಲ್ಲಿಯ ಒಂದೇ ಕುಟುಂಬದ 9 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದ್ದು, ಅವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ಉತ್ತರ ಕನ್ನಡದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದರಲ್ಲಿ ಶನಿವಾರ ಪತ್ತೆಯಾದ ಪಿ-93 ( ಜಿಲ್ಲಾ ಸೋಂಕಿತರ ಸಂಖ್ಯೆ ) ರ ಟ್ರಾವೆಲ್ ಚರಿತ್ರೆ ಶಿರಸಿಗರಲ್ಲಿ ಆತಂಕ ಮೂಡಿಸಿದೆ.
ಅರಬ್ ರಾಷ್ಟ್ರ ಕತಾರ್ನಿಂದ ಕಾರವಾರಕ್ಕೆ ಬಂದಿರುವ ಸೋಂಕಿತನಿಗೂ ಶಿರಸಿಗೂ ಪರೋಕ್ಷವಾಗಿ ಸಂಬಂಧವಿದ್ದು, ಸೋಂಕಿತನನ್ನು ಕಾರವಾರಕ್ಕೆ ತಲುಪಿಸಿದ ಕಾರಿನ ಚಾಲಕ ಶಿರಸಿಯ ಮುಸ್ಲಿಂ ಗಲ್ಲಿಯವನಾಗಿದ್ದಾನೆ. ಕಳೆದ ಮೇ 22 ರಂದು ಕತಾರ್ನಿಂದ ಹೊರಟ ಸೋಂಕಿತ ಬೆಂಗಳೂರಿಗೆ ಬಂದು 7 ದಿನಗಳ ಕಾಲ ಕ್ವಾರಂಟೈನಲ್ಲಿದ್ದರು. ಅಲ್ಲಿ ನಡೆದ ಸ್ವಾಬ್ ಟೆಸ್ಟ್ನಲ್ಲಿ ವರದಿ ನೆಗೆಟಿವ್ ಬಂದ ಕಾರಣ ಖಾಸಗಿ ಬಸ್ ಮೂಲಕ ಹುಬ್ಬಳ್ಳಿಗೆ ಆಗಮಿಸಿದ್ದು, ಅಲ್ಲಿಂದ ಶಿರಸಿಯ ಮುಸ್ಲಿಂ ಗಲ್ಲಿಯ ಚಾಲಕ ಹಾಗೂ ಸೋಂಕಿತನ ಸಂಬಂಧಿಕ ಆತನನ್ನು ಕಾರವಾರಕ್ಕೆ ತಲುಪಿಸಿದ್ದಾನೆ. ಈಗ ಕಾರವಾರದ ವ್ಯಕ್ತಿಗೆ ಸೋಂಕು ತಗುಲಿದ ಪರಿಣಾಮ ಚಾಲಕ ಹಾಗೂ ಆತನ ಕುಟುಂಬದವರನ್ನು ತಾಲೂಕಾ ಆಸ್ಪತ್ರೆಯ ಸಿಬ್ಬಂದಿಗಳು ಹೋಮ್ ಕ್ವಾರೆಂಟೈನ್ ಮಾಡಿದ್ದಾರೆ.
ಹುಬ್ಬಳ್ಳಿಯಿಂದ ಕಾರವಾರದವರೆಗೆ ಚಾಲಕ ಸೋಂಕಿತನ ಜೊತೆಗಿದ್ದ ಪರಿಣಾಮ ಮುಸ್ಲಿಂ ಗಲ್ಲಿಯ ಜನರಲ್ಲಿ ಈಗ ಆತಂಕ ಮೂಡಿದೆ. ಚಾಲಕ ಕಾರವಾರದಿಂದ ಹಿಂದುರಿಗಿದ ನಂತರ ಗಲ್ಲಿಯ ಓಡಾಡಿರುವ ಸಾಧ್ಯತೆಯಿದ್ದು, ಮುಸ್ಲಿಂ ಗಲ್ಲಿಯನ್ನು ಸೀಲ್ ಡೌನ್ ಮಾಡುತ್ತಾರೆಯೇ? ಎಂಬ ಪ್ರಶ್ನೆ ಸ್ಥಳೀಯರಲ್ಲಿದೆ. ಇದರ ಜೊತೆಗೆ ಕ್ವಾರೆಂಟೈನ್ ಮಾಡಲಾಗಿರುವ 9 ಜನರ ಗಂಟಲು ದ್ರವವನ್ನು ಭಾನುವಾರ ಅಥವಾ ಸೋಮವಾರ ಪರೀಕ್ಷೆಗೆ ಕಳುಹಿಸುವ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದ್ದು, ಅವರ ವರದಿ ನೆಗೆಟಿವ್ ಬರುವವರೆಗೆ ಶಿರಸಿಗರಿಗೆ ತೊಂದರೆ ತಪ್ಪಿದ್ದಲ್ಲ ಎನ್ನುವುದು ಅಧಿಕಾರಿಗಳ ಅಂಬೋಣವಾಗಿದೆ.