ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ತಗ್ಗಿದೆ. ಕಳೆದ ನಾಲ್ಕು ತಿಂಗಳಿಂದ ಭಾರಿ ಮಳೆ ಕಾರಣಕ್ಕೆ ಬಂದಾಗಿದ್ದ ಪ್ರವಾಸಿ ತಾಣಗಳತ್ತ ಇದೀಗ ಪ್ರವಾಸಿಗರು ಮುಖ ಮಾಡಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಕರಾವಳಿಯ ಕಡಲತೀರಗಳಿಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಸಮುದ್ರಕ್ಕಿಳಿಯಲು ಪ್ರವಾಸಿಗರಿಗೆ ಅವಕಾಶ ಸಿಕ್ಕಿದ್ದು, ಖುಷಿ ಅನುಭವಿಸುತ್ತಿದ್ದಾರೆ.
ಪ್ರವಾಸಿಗರಾದ ಲಕ್ಷ್ಮೀಕಾಂತ ಮಾತನಾಡಿ, "ಕಳೆದ ಕೆಲ ತಿಂಗಳ ಹಿಂದೆ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದಾಗ ನೀರಿಗಿಳಿಯಲು ಅವಕಾಶ ಸಿಕ್ಕಿರಲಿಲ್ಲ. ಮಳೆ ಕಾರಣದಿಂದಾಗಿ ಸಮುದ್ರಕ್ಕೆ ಇಳಿಯುವುದನ್ನು ನಿಷೇಧಿಸಲಾಗಿತ್ತು. ಇದೀಗ ಗೋವಾಕ್ಕೆ ತೆರಳಿದ್ದ ನಾವು ಕಾರವಾರ ಕಡಲತೀರಕ್ಕೆ ಆಗಮಿಸಿ ಎಂಜಾಯ್ ಮಾಡುತ್ತಿದ್ದೇವೆ. ಗೋವಾಗಿಂತಲೂ ಸ್ವಚ್ಚವಾಗಿರುವ ಇಲ್ಲಿನ ಕಡಲತೀರದಲ್ಲಿ ಎಂಜಾಯ್ ಮಾಡಲು ಖುಷಿಯಾಗುತ್ತಿದೆ. ಇಲ್ಲಿನ ವಾಟರ್ ಸ್ಪೋರ್ಟ್ಸ್ ಸಖತ್ ಖುಷಿ ಕೊಡುತ್ತಿದೆ. ಕೆಲಸದ ಒತ್ತಡದ ನಡುವೆ ಪ್ರವಾಸಕ್ಕೆ ಬಂದಿರುವುದರಿಂದ ಸ್ವಲ್ಪ ರಿಲಾಕ್ಸ್ ಆಗಿದ್ದೇವೆ" ಎಂದರು.
ವಾರ್‌ಶಿಪ್ ಮ್ಯೂಸಿಯಂ ಕ್ಯೂರೇಟರ್ ವಿಜಯ್ ಪ್ರತಿಕ್ರಿಯಿಸಿ, "ಮಳೆಗಾಲದ ವೇಳೆಯಲ್ಲಿ ಕಡಲತೀರಗಳಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರುವುದರ ಜೊತೆಗೆ ನೀರಿನ ಸೆಳೆತ ಸಹ ಇರುವುದರಿಂದ ಪ್ರವಾಸಿಗರಿಗೆ ನೀರಿಗಿಳಿಯಲು ನಿರ್ಬಂಧ ಹೇರಲಾಗುತ್ತದೆ. ಪ್ರತಿವರ್ಷ ಉತ್ತರ ಕನ್ನಡ ಜಿಲ್ಲೆಯ ಕಡಲತೀರಗಳಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಬೀಚ್‌ಗಳಿಗೆ ನಿಷೇಧ ಅವಧಿಯಾಗಿದ್ದು, ಸಮುದ್ರ ಅಪಾಯಕಾರಿಯಾಗುವುದರಿಂದ ನೀರಿಗಿಳಿಯಲು ಯಾರಿಗೂ ಸಹ ಅವಕಾಶ ಇರುವುದಿಲ್ಲ. ಇದೀಗ ಮಳೆ ಕಡಿಮೆಯಾಗಿದೆ. ನಿಷೇಧ ಅವಧಿಯೂ ಮುಗಿದಿರುವುದರಿಂದ ಪ್ರವಾಸಿಗರು ಸಮುದ್ರಕ್ಕಿಳಿದು ಎಂಜಾಯ್ ಮಾಡುತ್ತಿದ್ದಾರೆ. ಇಲ್ಲಿನ ಕಡಲತೀರದಲ್ಲಿರುವ ವಾರ್‌ಶಿಪ್ ಮ್ಯೂಸಿಯಂ, ರಾಕ್‌ಗಾರ್ಡನ್, ಸಾಲುಮರದ ತಿಮ್ಮಕ್ಕ ವನ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೂ ಸಹ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಸಾಲು ಸಾಲು ರಜೆಯಿಂದ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹರಿದುಬರುತ್ತಿರುವುದು ಪ್ರವಾಸೋದ್ಯಮಕ್ಕೆ ಚೇತರಿಕೆ ನೀಡಿದೆ" ಎಂದರು.
ಯುದ್ಧವಿಮಾನ ವಸ್ತುಸಂಗ್ರಹಾಲಯ: ಕಾರವಾರ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಶೀಘ್ರದಲ್ಲೇ ಯುದ್ಧವಿಮಾನ ವಸ್ತುಸಂಗ್ರಹಾಲಯ ಸಹ ಸಿದ್ಧವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಾರವಾರ ಇನ್ನಷ್ಟು ಪ್ರವಾಸಿಗರನ್ನ ಆಕರ್ಷಿಸಲಿದೆ. ಆದರೆ ಉತ್ತರ ಕನ್ನಡ ಜಿಲ್ಲೆ ಹತ್ತು ಹಲವು ಪ್ರವಾಸಿ ತಾಣಗಳನ್ನು ಹೊಂದಿದ್ದರೂ ಅವುಗಳ ಕುರಿತು ಪ್ರವಾಸಿಗರಿಗೆ ಸೂಕ್ತ ಮಾಹಿತಿ ಲಭ್ಯವಾಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕೊನೆಗೂ ಸುರಂಗ ಮಾರ್ಗದಲ್ಲಿ ತಾತ್ಕಾಲಿಕ ಸಂಚಾರಕ್ಕೆ ಅವಕಾಶ: ಸುರಕ್ಷತೆಗೆ ಪ್ರಾಧಿಕಾರವೇ ಹೊಣೆ ಎಂದ ಜಿಲ್ಲಾಡಳಿತ!