ಕಾರವಾರ: ಉತ್ತರ ಕನ್ನಡ ಜಿಲ್ಲೆ ಕರಾವಳಿಯಲ್ಲಿ ಕ್ಯಾರ್ ಚಂಡಮಾರುತ ಅಬ್ಬರ ಜೋರಾಗಿದ್ದು, ಕಡಲತೀರದ ಜನರು ಗಾಳಿ, ಮಳೆ ಜತೆಗೆ ಅಲೆಗಳ ಅಬ್ಬರಕ್ಕೆ ಕಂಗಾಲಾಗಿದ್ದಾರೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆ ಸುರಿಯುತ್ತಿತ್ತು. ತಡರಾತ್ರಿಯಿಂದ ಕ್ಯಾರ್ ಚಂಡಮಾರುತದ ಅಬ್ಬರ ಜೋರಾಗಿದ್ದು, ಸಮುದ್ರ ತೀರಗಳಲ್ಲಿ ಆಳೆತ್ತರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.
ಅಲೆಗಳಿಂದಾಗಿ ಕಾರವಾರ, ಅಂಕೋಲಾ, ಭಟ್ಕಳ ಭಾಗದ ಕಡಲತೀರದಲ್ಲಿದ್ದ ದೋಣಿಗಳು ದಡಕ್ಕೆ ಹೊಡೆದು ಹಾನಿಯಾಗಿವೆ. ಅಲ್ಲದೆ ಕಾರವಾರದಲ್ಲಿ ಕಾಳಿಯ ಅಬ್ಬರಕ್ಕೆ ಕರಾವಳಿ ಸಂಗಮೋತ್ಸವಕ್ಕೆ ಹಾಕಿದ್ದ ಮಳಿಗೆಗಳು ಕಿತ್ತು ಹೋಗಿವೆ.
ಜಿಲ್ಲೆಯ ಘಟ್ಟದ ಮೇಲ್ಭಾಗದಲ್ಲಿಯೂ ಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಹಳ್ಳ, ಕೊಳ್ಳಗಳು ತುಂಬಿ ಹರಿಯಲಾರಂಭಿಸಿದ್ದು, ಕೊಯ್ಲಿಗೆ ಬಂದ ಬೆಳೆ ಮುಳುಗಡೆಯಾಗಿದೆ. ಮಳೆ ಇನ್ನು ಎರಡ್ಮೂರು ದಿನಗಳ ಕಾಲ ಮುಂದುವರಿಯಲಿದ್ದು, ಜಿಲ್ಲೆಯಾದ್ಯಂತ ಜನ ಆತಂಕಗೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.