ಕಾರವಾರ/ಭಟ್ಕಳ: ಟಿಪ್ಪುವಿನ ಒಬ್ಪ ಪತ್ನಿ ಭಟ್ಕಳದ ನವಾಯತ್ ಸಮುದಾಯದವರಾಗಿದ್ದರು. ಭಟ್ಕಳಕ್ಕೂ ಟಿಪ್ಪು ಸುಲ್ತಾನರಿಗೂ ಅವಿನಾಭಾವ ಸಂಬಂಧವಿತ್ತು. ಆಂಗ್ಲರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ್ದರಲ್ಲದೇ ಇಡೀ ತಮ್ಮ ಕುಟುಂಬವನ್ನೇ ದೇಶಕ್ಕಾಗಿ ಬಲಿ ಕೊಟ್ಟರು. ಇಂತಹ ಮಹಾನ್ ಹೋರಾಟಗಾರ ಇತಿಹಾಸದಲ್ಲಿ ಮತ್ತೆಲ್ಲೂ ಕಾಣಲ್ಲ ಎಂದು ಶಿಕ್ಷಣ ತಜ್ಞ ಹಾಗೂ ಟಿಪ್ಪು ಸುಲ್ತಾನ್ ಗ್ರಂಥಕರ್ತ ಮೌಲಾನ ಮುಹಮ್ಮದ್ ಇಲ್ಯಾಸ್ ನದ್ವಿ ಹೇಳಿದರು.
ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ವತಿಯಿಂದ 269 ನೇ ಟಿಪ್ಪು ಜಯಂತಿ ನಿಮಿತ್ತ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ತಾಲೂಕಿನ ವಿವಿಧ ಶಾಲಾ ವಿದ್ಯಾರ್ಥಿಗಳು ಭಾಷಣಗಳಲ್ಲಿ ಭಾಗವಹಿಸಿ ಟಿಪ್ಪು ಸುಲ್ತಾನನ ಆಡಳಿತ, ಆತನ ಕಾಲದ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲಿದರು. ಭಾಷಣ ಸ್ಪರ್ಧೆಯಲ್ಲಿ ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಸೈಯ್ಯದ್ ಅಹ್ಮದ್ ಅಜಾಯಿಬ್ ಪ್ರಥಮ, ನೌನಿಹಾಲ್ ಸೆಂಟ್ರಲ್ ಸ್ಕೂಲ್ ನ ಮುಹಮ್ಮದ್ ಮಾಹಿರ್ ಸುನ್ಹೇರಿ ದ್ವಿತೀಯ, ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯ ಮಫಾಝ್ ಆಹ್ಮದ್ ಇಕ್ಕೇರಿ ತೃತೀಯ ಬಹುಮಾನ ಪಡೆದುಕೊಂಡರು.