ಕಾರವಾರ: ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದರಲ್ಲಿ ಭಾಗಿಯಾದವರನ್ನು ಮನೆಗೆ ಕಳುಹಿಸುವುದಾಗಿ ಸಿಎಂ ಯಡಿಯೂರಪ್ಪ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇತಿಹಾಸ ಪ್ರಸಿದ್ಧ ಬನವಾಸಿ ಕದಂಬೋತ್ಸವ ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ, ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಉನ್ನತ ಅಧಿಕಾರಿಗಳೇ ಭಾಗಿಯಾಗಿರುವ ಆರೋಪಗಳು ಹೆಚ್ಚಾಗಿ ಕೇಳಿಬರುತ್ತಿವೆ. ಸರ್ಕಾರದ ಸವಲತ್ತುಗಳು ಸಮಯಕ್ಕೆ ಸರಿಯಾಗಿ ಜನರಿಗೆ ತಲುಪುತ್ತಿಲ್ಲ. ಇಂತಹ ಭ್ರಷ್ಟ ಅಧಿಕಾರಿಗಳಿಗೆ ಸರಿಯಾದ ಶಿಕ್ಷೆ ಆಗಬೇಕಿದೆ ಎಂದರು.
ಅಲ್ಲದೆ ಅಗತ್ಯ ಬಿದ್ದರೆ ಅಂತಹವರನ್ನು ಕೆಲಸದಿಂದ ತೆಗೆದು ಹಾಕಿ ಮನೆಗೆ ಕಳುಹಿಸಲಾಗುವುದು. ಸರ್ಕಾರಿ ನೌಕರರು ಸುಧಾರಣೆ ಆಗದಿದ್ರೆ ಕಠಿಣ ಕ್ರಮ ಕೈಗೊಳ್ಳಲಿದ್ದೇನೆ. ಭ್ರಷ್ಟಾಚಾರದ ವಿರುದ್ಧ ಸೂಕ್ತ ಕಾನೂನು ಜಾರಿಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬನವಾಸಿ ಐತಿಹಾಸಿಕ ಪ್ರಾಮುಖ್ಯತೆ ಹೊಂದಿದ ಕ್ಷೇತ್ರ. ಕದಂಬೋತ್ಸವಕ್ಕೆ ಕರ್ನಾಟಕ ಸರ್ಕಾರ ಮರುಜೀವ ನೀಡಿದೆ. ನಾಡು, ಧರ್ಮ, ಕರ್ಮ ಭೂಮಿಯನ್ನು ರಕ್ಷಿಸಿ ರಾಜ್ಯದ ಪ್ರವಾಸೋದ್ಯಮದಲ್ಲಿ ಬನವಾಸಿಯನ್ನು ಅಭಿವೃದ್ಧಿಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಡಾ.ಸುಧಾಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪಂಪ ಪ್ರಶಸ್ತಿಯನ್ನು ದಲಿತ ಕವಿ ಸಿದ್ದಲಿಂಗಯ್ಯ ಅವರಿಗೆ ನೀಡಿರೋದು ಉತ್ತಮವಾಗಿದೆ. ದಲಿತ ಹೋರಾಟಕ್ಕೆ ಕಾವ್ಯದ ಮೂಲಕ ಧ್ವನಿ ಎತ್ತಿದವರು ಡಾ. ಸಿದ್ಧಲಿಂಗಯ್ಯ. ಯುವಕರಿಗೆ ಉದ್ಯೋಗ ಕೆಲಸ ಒದಗಿಸಲು ಪ್ರವಾಸೋದ್ಯಮ ಇಲಾಖೆ ಸಮರ್ಥವಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು. ಬನವಾಸಿಯನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸಲು ಸರ್ಕಾರ ಆದ್ಯತೆ ನೀಡಿದೆ. ಜಿಲ್ಲೆಯ 25 ಕೆರೆಗಳ ಪುನಶ್ಚೇತನ, ಮಂಗನ ಕಾಯಿಲೆ ಬಗ್ಗೆ ವಿಶೇಷ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ. ಮೀನುಗಾರ ರಕ್ಷಣೆಗೂ ಸರ್ಕಾರ ಆದ್ಯತೆ ನೀಡಿದೆ ಎಂದು ಹೇಳಿದರು.
ರಾಜ್ಯದ ಸಮಗ್ರ ಅಭಿವೃದ್ಧಿಗೆ ಮಾ.5 ರಂದು ಬಜೆಟ್ ಮಂಡನೆಯಾಗಲಿದೆ. ಬಜೆಟ್ಗೆ ಈಗಾಗಲೇ ಸಿದ್ಧತೆ ಪ್ರಾರಂಭವಾಗಿದೆ. ರೈತರ ಸಮಸ್ಯೆ ಇನ್ನು ಪರಿಹಾರಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಮರ್ಥ ಬಜೆಟ್ ಮಂಡಿಸಲಾಗುವುದು ಎಂದು ಭರವಸೆ ನೀಡಿದರು.