ಭಟ್ಕಳ : ಪ್ರಸಿದ್ದ ಪ್ರವಾಸಿ ತಾಣವಾದ ಮುರ್ಡೇಶ್ವರ ದೇಗುಲದ ಸಮುದ್ರ ತೀರದಲ್ಲಿರುವ 6 ಅಂಗಡಿಗಳಲ್ಲಿ ರಾತ್ರಿ ಕಳ್ಳರು ಮಧ್ಯರಾತ್ರಿ ಕೈಚಳಕ ತೋರಿಸಿದ್ದಾರೆ.
ಸೋಮವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಇಬ್ಬರು ಯುವಕರು ಒಟ್ಟು 5 ಅಂಗಡಿಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಫ್ಯಾನ್ಸಿ ವಸ್ತುಗಳೂ ಸೇರಿದಂತೆ ಗೊಂಬೆ ಮತ್ತು ಬಟ್ಟೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿವೆ ಎಂದು ಹೇಳಲಾಗಿದೆ. ಕಳ್ಳರು ಕೃತ್ಯ ಎಸಗಿ ಹೋಗುತ್ತಿರುವ ವಿಡಿಯೋ ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ, ನಿಮ್ಮ ಅಂಗಡಿಯ ಭದ್ರತೆ ನಿಮ್ಮದು ಎಂದು ಹೇಳಿ ಕಳುಹಿಸಿದ್ದಾರೆ ಎಂದು ಅಂಗಡಿ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಇದೇ ರೀತಿಯ ಕಳ್ಳತನ ಪ್ರಕರಣಗಳು ನಡೆದಿದ್ದು, ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದರೂ ಕ್ರಮಕ್ಕೆ ಮುಂದಾಗಿಲ್ಲ. ಇದ್ರ ಜೊತೆಗೆ ಸಮುದ್ರದ ನೀರು ಅಂಗಡಿಯೊಳಗೆ ನುಗ್ಗಿ ಹಾನಿಯಾಗುತ್ತಿದೆ. ಇಲ್ಲಿ ವ್ಯಾಪಾರ ಮಾಡಲು ಸುಸಜ್ಜಿತ ಸ್ಥಳಾವಕಾಶದ ಕೊರತೆಯಿದ್ದು, ಸಮಸ್ಯೆಯಾಗದಂತೆ ಸಹಕಾರ ನೀಡಬೇಕು ಎಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.