ಭಟ್ಕಳ: ತಿರುಪತಿ ದೇವಸ್ಥಾನದ ಆಸ್ತಿ ಮಾರಾಟ ಸಂಬಂಧದ ತಡೆಯಾಜ್ಞೆ ನೀಡಿ ರಾಜ್ಯಪಾಲರ ನೇತೃತ್ವದಲ್ಲಿ ಸಾಧು ಸಂತರ ಸಮಿತಿ ರಚಿಸುವಂತೆ ತಾಲೂಕಿನ ಉತ್ತರ ಕನ್ನಡ ಶ್ರೀ ರಾಮ ಸೇನಾ ಘಟಕ ಸಹಾಯಕರ ಆಯುಕ್ತ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ಸಂಘಟನೆಯ ಮನವಿಯನ್ನು ಕಚೇರಿ ಶಿರಸ್ದೇದಾರ್ ಎಲ್.ಎ.ಭಟ್ ಸ್ವೀಕರಿಸಿದರು. ಆಂಧ್ರ ಪ್ರದೇಶ ಸರ್ಕಾರದ ಅಧೀನದಲ್ಲಿರುವ ಟಿಟಿಡಿ, ತಿರುಪತಿ ದೇವಸ್ಥಾನ ವ್ಯಾಪ್ತಿಯ 50ಕ್ಕೂ ಹೆಚ್ಚು ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿದೆ.
ಆಂಧ್ರದ ಈ ನಡೆಯನ್ನು ಖಂಡಿಸುತ್ತೇವೆ. ಇದು ಭಕ್ತ ಸಮೂಹಕ್ಕೆ ಮಾಡುವ ದ್ರೋಹವಾಗಿದೆ. ರಾಜ್ಯಪಾಲರ ನೇತೃತ್ವದಲ್ಲಿ ಸರ್ಕಾರೇತರ ಸಮಿತಿ ರಚಿಸಬೇಕು. ಸರ್ಕಾರದ ಕಾನೂನು ಬಾಹಿರವಾದ ಸಂವಿಧಾನ ವಿರೋಧಿ ನೀತಿಯನ್ನು ತಡೆಯಬೇಕು. ಸರ್ಕಾರ ತಮ್ಮ ಬೇಡಿಕೆ ಈಡೇರಿಸದಿದ್ದರೇ ಮುಂದಿನ ದಿನಗಳಲ್ಲಿ ಸಾಧು ಸಂತರ ನೇತೃತ್ವದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ದೇವಸ್ಥಾನದ ಯಾವುದೇ ಆಸ್ತಿ ಮಾರಾಟ ಮಾಡದಂತೆ ಕ್ಷಣವೇ ರದ್ದುಗೊಳಿಸಬೇಕು. ಭಕ್ತರು ದೇವರಿಗೆ ಅರ್ಪಿಸುವ ಹುಂಡಿ ಹಣ ಸರ್ಕಾರ ತೆಗೆದುಕೊಳ್ಳುತ್ತಿರುವುದು ಅಪರಾಧ. ನೂರಾರು ವರ್ಷಗಳ ಹಿಂದೆ ರಾಜರು, ಭಕ್ತರು ದೇವರಿಗೆ ಅರ್ಪಿಸಿದ ಸಂಪತ್ತಿನ ಮೇಲೆ ಕೈ ಹಾಕಿರುವುದು ಸರ್ಕಾರದ ಬೌದ್ಧಿಕ ದಿವಾಳಿತನ ತೋರಿಸುತ್ತಿದೆ. ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಕಾನೂನು ರಚಿಸಲು ಆಗ್ರಹಿಸಿದರು.