ಭಟ್ಕಳ: ತಾಲೂಕಿನ ಕಾರ್ ಸ್ಟ್ರೀಟ್ನ ಕಾರ್ಪೊರೇಶನ್ ಬ್ಯಾಂಕ್ ಮುಂಭಾಗದಲ್ಲಿ ರಾತ್ರಿ ಕಸ ಎಸೆದು ಹೋದ ಆಟೋ ಚಾಲಕನಿಂದಲೇ ಪುರಸಭೆ ಅಧಿಕಾರಿಗಳು ಕಸವನ್ನು ಸ್ವಚ್ಛ ಮಾಡಿಸಿ ಆಟೋದಲ್ಲೇ ತುಂಬಿ ಕಳುಹಿಸಿದ ಘಟನೆ ನಡೆದಿದೆ.
ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಭಟ್ಕಳ ಕಾರ್ಪೊರೇಶನ್ ಬ್ಯಾಂಕ್ ಮುಂಭಾಗದಲ್ಲಿ ಓರ್ವ ಆಟೋ ಚಾಲಕ ಆಟೋದಲ್ಲಿ ಬಂದು ಕಸ ಎಸೆದು ಹೋಗಿದ್ದ. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಪುರಸಭೆಗೆ ಕರೆ ಮಾಡಿ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪುರಸಭೆ ಅಧಿಕಾರಿಗಳು, ಅಲ್ಲೇ ಪಕ್ಕದಲ್ಲಿರುವ ಅಂಗಡಿಯ ಸಿಸಿಟಿವಿ ಮೂಲಕ ಕಸ ಎಸೆದು ಹೋದ ಆಟೋ ಚಾಲಕನನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಆತನನ್ನು ಸ್ಥಳಕ್ಕೆ ಕರೆತಂದು ಆತನ ಕೈಯಿಂದಲೇ ತಾನು ಹಾಕಿರುವ ಕಸವನ್ನು ಸ್ವಚ್ಛ ಮಾಡಿಸಿ ಆತನ ಆಟೋದಲ್ಲಿಯೇ ತುಂಬಿ ಕಳುಹಿಸಿದ್ದಾರೆ.
ನಂತರ ಪುರಸಭೆ ಆರೋಗ್ಯ ಅಧಿಕಾರಿ ಸುಜಯಾ ಸೋಮನ್ ಮಾತನಾಡಿ, ಈ ಸ್ಥಳದಲ್ಲಿ ಪದೇ ಪದೇ ಕಸ ಹಾಕುತ್ತಿರುವುದರ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿಗೆ ದೂರು ನೀಡಿದ್ದು ನಮ್ಮ ಗಮನಕ್ಕೆ ಬಂದಿದೆ. ಈ ಸ್ಥಳದಲ್ಲಿ ರಾತ್ರಿ ಸಾರ್ವಜನಿಕರೊಬ್ಬರು ಕಾಸ ಹಾಕಿರುವುದನ್ನು ದೂರವಾಣಿಯ ಮೂಲಕ ದೂರು ಬಂದಿದ್ದು, ನಾವು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಆಟೋ ಚಾಲಕನಿಂದಲೇ ಕಸವನ್ನು ಸ್ವಚ್ಛ ಮಾಡಿಸಿ ಕಸವನ್ನು ಆತನ ಆಟೋದಲ್ಲಿಯೇ ತುಂಬಿ ಕಳುಹಿಸಿದ್ದೇವೆ. ಮುಂದಿನ ದಿನಗಲ್ಲಿ ಈ ರೀತಿಯಲ್ಲಿ ಯಾರಾದರೂ ಕಸ ಹಾಕಿರುವುದು ನಮ್ಮ ಗಮನಕ್ಕೆ ಬಂದರೆ ಅವರ ಕೈಯಿಂದಲೇ ಕಸದ ಸ್ವಚ್ಛತೆ ಮಾಡಿಸಿ ಅಧಿಕ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.