ಕಾರವಾರ(ಉತ್ತರ ಕನ್ನಡ): ಹಳಿಯಾಳ ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದ್ದಂತೆ, ಅವುಗಳಿಂದಾಗುವ ತೊಂದರೆ ತಪ್ಪಿಸಲು ಮುಂದಾದ ಸ್ಥಳೀಯ ಆಡಳಿತ ನಾಯಿಗಳನ್ನು ಹಿಂಸಾತ್ಮಕವಾಗಿ ಹಿಡಿದು ಹಳಿಯಾಳ ಹಾಗೂ ಯಲ್ಲಾಪುರ ಗಡಿಭಾಗದ ಕಾಡಂಚಿನಲ್ಲಿ ಬಿಟ್ಟು ಹೋಗಿದೆ. ಇದರಿಂದ ಕಾಡು ಪ್ರಾಣಿಗಳಿಗೆ ಅವು ಆಹಾರವಾಗುವ ಸಾಧ್ಯತೆ ದಟ್ಟವಾಗಿದೆ.
ಪುರಸಭೆ ಕ್ರಮಕ್ಕೆ ಸಾರ್ವಜನಿಕರಿಂದ ಆಕ್ರೋಶ: ಹಳಿಯಾಳ ಪಟ್ಟಣದಲ್ಲಿ ಬೀದಿ ಬದಿಗಳಲ್ಲಿ ಓಡಾಡುತ್ತಿದ್ದ, ಸುಮಾರು 80 ರಿಂದ 100 ರಷ್ಟು ನಾಯಿಗಳನ್ನು ಟಾಟಾ ಏಸ್ ವಾಹನದಲ್ಲಿ ತುಂಬಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಹಳಿಯಾಳ ಕ್ರಾಸ್ ಸಮೀಪದ ಒಳ ರಸ್ತೆಯಲ್ಲಿ ಬಿಟ್ಟು ತೆರಳಿದ್ದಾರೆ. ಹಿಂಸಾತ್ಮಕವಾಗಿ ಅರಣ್ಯಕ್ಕೆ ಸ್ಥಳಾಂತರ ಮಾಡಿರುವ ಪುರಸಭೆ ಕ್ರಮಕ್ಕೆ ಇದೀಗ ಆಕ್ರೋಶ ವ್ಯಕ್ತವಾಗತೊಡಗಿದೆ.
ಹಳಿಯಾಳದ ಯೋಗರಾಜ ಎಸ್ ಕೆ, ಮೇನಕಾ ಗಾಂಧಿಯವರ ಪೀಪಲ್ ಫಾರ್ ಅನಿಮಲ್, ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾದವರು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಅತ್ಯಂತ ಕ್ರೂರವಾಗಿ ರೋಗಗ್ರಸ್ತವಾಗಿರುವ (ಕೆಲವು) ಬೀದಿ ನಾಯಿಗಳನ್ನು ಹಿಂಸಾತ್ಮಕವಾಗಿ ವಾಹನದಲ್ಲಿ ಸಾಗಿಸಿರುವ ಕುರಿತು ದೂರು ನೀಡಿದ್ದಾರೆ.
ಕಾಡು ಪ್ರಾಣಿಗಳಿಗೆ ಆಹಾರವಾಗುವ ಸಾಧ್ಯತೆ: ಇನ್ನು, ಯಲ್ಲಾಪುರ ಪಟ್ಟಣದ ಸುತ್ತಮುತ್ತ ಇತ್ತೀಚೆಗೆ ಚಿರತೆ ಕರಡಿ ಹಾವಳಿ ಹೆಚ್ಚಾಗಿದೆ. ಪಟ್ಟಣದ ಅಂಚಿನ ಅರಣ್ಯ ಪ್ರದೇಶದಲ್ಲಿ ಬಿಟ್ಟಿರುವ ಬೀದಿ ನಾಯಿಗಳು ಅವಕ್ಕೆ ಆಹಾರವಾಗುವ ಸಾಧ್ಯತೆ ಇದೆ. ಅಲ್ಲದೆ ಇಂತಹ ನಾಯಿಗಳನ್ನು ಬೇಟೆಯಾಡುವ ಸಲುವಾಗಿ ಈ ಚಿರತೆ ಮತ್ತು ಕರಡಿಗಳು ಪಟ್ಟಣ ಹಾಗೂ ಜನ ವಾಸ್ತವ್ಯ ಪ್ರದೇಶದವರೆಗೂ ಬರುವ ಸಾಧ್ಯತೆ ಇದೆ. ಅರಣ್ಯದ ಸಹವಾಸವೇ ಗೊತ್ತಿಲ್ಲದ ಬೀದಿ ನಾಯಿಗಳು ಎಲ್ಲೆಂದರಲ್ಲಿ ಸುತ್ತಿ ಅರಣ್ಯದಲ್ಲಿ ಆಹಾರ ನೀರು ಸಿಗದೇ ಹಸಿವಿನಿಂದ ದಯನೀಯವಾಗಿ ಸಾಯುವ ಸಾಧ್ಯತೆ ಹೆಚ್ಚಿದೆ ಎಂದು ಪ್ರಾಣಿಪ್ರೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಪುರಸಭೆಗೆ ನೋಟೀಸ್: ಹಳಿಯಾಳ ಪಟ್ಟಣದ ಬಿದಿನಾಯಿಗಳನ್ನು ಕಾಡಿನಲ್ಲಿ ಬಿಟ್ಟಿರುವ ಕುರಿತು, ಹಳಿಯಾಳ ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿಗಳು ಸ್ಪಷ್ಟನೆ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ಬೆಂಗಳೂರಿನಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯವಾಣಿಗೆ ಹಳಿಯಾಳ ಪಟ್ಟಣದ ಸ್ಥಳೀಯ ನಿವಾಸಿಗರು ಕರೆ ಮಾಡಿ ದೂರನ್ನು ಸಲ್ಲಿಸಿದ್ದಾರೆ. ಹಳಿಯಾಳ ಪಟ್ಟಣದ ನಾಯಿಗಳನ್ನು ಹಿಂಸಾತ್ಮಕವಾಗಿ ಹಿಡಿದು ಸಾಗಾಣಿಕೆ ಮಾಡಿ ಕಾಡಿನಲ್ಲಿ ಬಿಟ್ಟಿರುವ ವಿಡಿಯೋ ತುಣುಕು ವಾಟ್ಸಪ್ಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಬೀದಿ ನಾಯಿ ದಾಳಿ ಮಾಡಿದರೆ ಕೊಂದೇ ಬಿಡುವೆ.. ಏರ್ಗನ್ ಪ್ರದರ್ಶಿಸಿದ ವ್ಯಕ್ತಿ ವಿರುದ್ಧ ಕೇಸ್
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ 1960 ಅನ್ನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸುಪ್ರೀಂ ಕೋರ್ಟ್ನ ಆದೇಶದಂತೆ ಪ್ರಾಣಿಗಳಿಗೆ ಸಂಪೂರ್ಣ ಬದುಕುವ ಮತ್ತು ಸ್ವಾತಂತ್ರದ ಹಕ್ಕನ್ನು ಸಂವಿಧಾನದ ಸೆಕ್ಷೆನ್ 03 ಮತ್ತು 11 ಗಳನ್ನು ಆರ್ಟಿಕಲ್ 51 A (8) (h) ರ ಇವುಗಳಲ್ಲಿ ತಿಳಿಸಲಾಗಿರುತ್ತದೆ.
ಹಿಂಸಾತ್ಮಕವಾಗಿ ನಾಯಿಗಳ ಸಾಗಣೆ: ಇನ್ನು ನಾಯಿಗಳನ್ನು ಹಿಡಿದು ಅವುಗನ್ನು ಸಾಗಿಸುವ ಗುತ್ತಿಗೆದಾರರು ಸುಮಾರು 10-20 ನಾಯಿಗಳನ್ನಷ್ಟೇ ಸಾಗಿಸಬಹುದಾಗಿದ್ದ ಟಾಟಾ ಏಸ್ ವಾಹನದಲ್ಲಿ 80 ರಿಂದ 100 ನಾಯಿಗಳನ್ನು ಹಿಂಸಾತ್ಮಕವಾಗಿ ಹಳಿಯಾಳದಿಂದ ಯಲ್ಲಾಪುರ ಪಟ್ಟಣದ ಅಂಚಿಗೆ ತಂದು ಬಿಟ್ಟಿದ್ದಾರೆ. ಅದರಲ್ಲಿ ಕೆಲವು ನಾಯಿಗಳು ರೋಗಗ್ರಸ್ತವಾಗಿದ್ದು, ಇನ್ನೂ ಕೆಲವು ನಾಯಿಗಳು ಆರೋಗ್ಯಕರವಾಗಿರುವುದು ಕಂಡುಬರುತ್ತಿವೆ.
ಬೀದಿ ಸುತ್ತಿ ತಿನ್ನುವ ನಾಯಿಗಳು ಹಲವಾರು ಸೋಂಕುಗಳನ್ನು ಹೊಂದಿವೆ. ಇಂತಹ ಶ್ವಾನಗಳನ್ನು ಇದೀಗ ಅರಣ್ಯ ಪ್ರದೇಶದಲ್ಲಿ ಬಿಟ್ಟಾಗ, ಈ ಸೋಂಕು ಅರಣ್ಯದ ಪ್ರಾಣಿಗಳಿಗೆ ಹರಡುವ ಭೀತಿ ಎದುರಾಗಿದೆ. ಯಲ್ಲಾಪುರದ ಅರಣ್ಯdಲ್ಲಿರುವ ಪ್ರಾಣಿಗಳಿಗೂ ರೋಗ ಹರಡುವ ಭೀತಿ ಇದೆ. ಅಲ್ಲದೆ ರೋಗಗ್ರಸ್ಥ ನಾಯಿಗಳಿಗೆ ವ್ಯಾಕ್ಸಿನೇಷನ್ ಅಥವಾ ಯಾವುದೇ ಔಷದೋಪಚಾರವನ್ನು ನಡೆಸಿಲ್ಲ ಎಂದು ಪ್ರಾಣಿಪ್ರೀಯರು ಆಕ್ರೋಶ ವ್ಯಕ್ತಡಿಸಿದ್ದಾರೆ.
ಯಲ್ಲಾಪುರ ಪಟ್ಟಣಕ್ಕೆ ಆಗಮಿಸುತ್ತಿರುವ ನಾಯಿಗಳು: ಇನ್ನು ಹಳಿಯಾಳ ಕ್ರಾಸ್ ಬಳಿ ಬಿಟ್ಟ ನಾಯಿಗಳು ಇದೀಗ ಯಲ್ಲಾಪುರ ಸಮೀಪವಾಗಿದ್ದರಿಂದ ಕೆಲ ನಾಯಿಗಳು ಯಲ್ಲಾಪುರಕ್ಕೆ ಆಗಮಿಸಿವೆ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ನಾಯಿಗಳು ಕಂಡುಬರುತ್ತಿವೆ. ಇದರಿಂದ ಯಲ್ಲಾಪುರದಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗುವ ಆತಂಕ ಇದೀಗ ಎದುರಾಗಿದೆ.