ಭಟ್ಕಳ: ಪುರಸಭೆ ವ್ಯಾಪ್ತಿಯ ಕೋಗ್ತಿ ಕೆರೆಯ ಸಮೀಪದ ರಸ್ತೆಯಲ್ಲಿ ಮಂಗಳವಾರದಂದು ಯಾರೋ ಅಪರಿಚಿತರು ಮನೆಯ ತ್ಯಾಜ್ಯವನ್ನು ಚೀಲದಲ್ಲಿ ತುಂಬಿ ತಂದು ಹಾಕಿದ್ದರು. ಇದರಿಂದ ಆಕ್ರೋಶಿತಗೊಂಡ ಕೋಗ್ತಿ ವಾರ್ಡ್ನ ಜನ ಇಂತಹ ಕೃತ್ಯವೆಸಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸರಿಗೆ ಆಗ್ರಹಿಸಿದರು.
ತ್ಯಾಜ್ಯ ಹಾಕಿರುವ ಕುರಿತು ನೂರಾರು ಸ್ಥಳೀಯರು ಸ್ಥಳಕ್ಕೆ ಜಮಾಯಿಸಿ, ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಸಿಪಿಐ ಪ್ರಕಾಶ್, ನಗರ ಠಾಣೆ ಪಿಎಸ್ಐ ಲಕ್ಕಪ್ಪ ನಾಯ್ಕ, ಪಿಎಸ್ಐ ಅಪ್ಪಾಜಿ ಹಾಗೂ ಸಿಬ್ಬಂದಿ ಆಕ್ರೋಶಿತರನ್ನು ಸಮಾಧಾನಪಡಿಸಿದರು. ಹಾಗೂ ಸ್ಥಳದಿಂದಲೇ ಪುರಸಭೆ ಮುಖ್ಯಾಧಿಕಾರಿಗೆ ದೂರವಾಣಿ ಕರೆ ಮಾಡಿ, ಘಟನೆಯ ಬಗ್ಗೆ ತಿಳಿಸಿ, ಕಸದ ವಾಹನವನ್ನು ಕಳುಹಿಸಿ ಕೊಡುವಂತೆ ಹೇಳಿದರು. ಬಳಿಕ ಪುರಸಭೆ ಕಸದ ವಾಹನ ಬಂದು ಎಸೆದ ಕಸವನ್ನು ಸ್ವಚ್ಛ ಮಾಡಿ ವಾಹನದಲ್ಲಿ ತುಂಬಿಕೊಂಡು ತೆರಳಿತು.
ಇನ್ನು, ಇಂತಹ ಕೃತ್ಯ ಎರಡು ಬಾರಿ ನಡೆದಿದ್ದು, ಯಾರೋ ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಿದ್ದಾರೆ. ತಕ್ಷಣ ಈ ಕೆರೆ ವ್ಯಾಪ್ತಿಯ ಸುತ್ತಲು ಸಿಸಿಟಿವಿ ಅಳವಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.