ಕಾರವಾರ: ಕಡಲನಗರಿ ಕಾರವಾರದಲ್ಲಿ ಫಲವತ್ತಾದ ಭೂಮಿ ಜೊತೆಗೆ ಉತ್ತಮ ಮಳೆಯಾಗುತ್ತಿದ್ದರೂ ಕೃಷಿ ನಿರ್ಲಕ್ಷಿಸಲಾಗಿದೆ. ಪರಿಣಾಮ ,ಸಾವಿರಾರು ಎಕರೆ ಕೃಷಿಭೂಮಿ ಪಾಳು ಬಿದ್ದಿದೆ.
ಕಳೆದ ಕೆಲ ವರ್ಷದ ಹಿಂದೆ ಎಲ್ಲರೂ ಕೃಷಿ ಮಾಡುತ್ತಿದ್ದರು. ಜತೆಗೆ ಕಲ್ಲಂಗಡಿ, ತರಕಾರಿ ಸೇರಿದಂತೆ ಇನ್ನಿತರ ದವಸ ಧಾನ್ಯಗಳನ್ನು ಬೆಳೆಯಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ರೈತರು ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದು, ಫಲವತ್ತಾದ ಕೃಷಿ ಭೂಮಿ ಪಾಳು ಬಿದ್ದಿದೆ. ಇಲ್ಲಿನ ಬಹುತೇಕ ಯುವಕರು ಕೃಷಿ ತೊರೆದು ಗೋವಾ ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ಇದರಿಂದ ಕೃಷಿ ಮಾಡುವವರ ಸಂಖ್ಯೆ ಕೂಡ ಕಡಿಮೆಯಾಗಿದೆ ಎನ್ನುತ್ತಾರೆ ಸ್ಥಳೀಯರು.
ಕಾರವಾರ ತಾಲೂಕಿನ ಮಾಜಾಳಿ, ಅಸ್ನೋಟಿ, ಹಣಕೋಣ, ಹಳಗಾ, ಉಳಗಾ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಪಾಳು ಬಿದ್ದಿದೆ. ಕಳೆದ ಏಳೆಂಟು ವರ್ಷದಿಂದ ಕೃಷಿ ಮಾಡದೇ ಹಾಗೆ ಬಿಡಲಾಗಿದೆ. ಇನ್ನು ಕೆಲವು ಭಾಗಗಳಲ್ಲಿ ಕೃಷಿ ಭೂಮಿಯನ್ನ ಸೈಟ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಕೃಷಿ ಬಗ್ಗೆ ಸೂಕ್ತ ಜಾಗೃತಿ ಮೂಡಿಸದ ಕಾರಣ ಕೃಷಿಗೆ ಹಿನ್ನಡೆಯಾಗಿದ್ದು, ತಾಲೂಕಿನಾದ್ಯಂತ ಇಷ್ಟೊಂದು ಕೃಷಿ ಭೂಮಿ ಪಾಳು ಬಿಳ್ಳುತ್ತಿರುವುದಕ್ಕೆ ಕೃಷಿ ಇಲಾಖೆ ನಿರ್ಲಕ್ಷ್ಯ ಕೂಡ ಕಾರಣ ಎನ್ನಲಾಗಿದೆ.
ಆದರೆ, ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳನ್ನು ಕೇಳಿದ್ರೆ, ಇಲ್ಲಿನ ಕೃಷಿಕರು ಗೋವಾಕ್ಕೆ ಕಂಪನಿ ಕೆಲಸ ಮಾಡಲು ಹೋಗುತ್ತಾರೆ. ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಇತ್ತೀಚೆಗೆ ಕೆಲವರು ಕಂಪನಿ ಬಿಟ್ಟು ಕೃಷಿಯತ್ತ ಮುಖಮಾಡಿದ್ದಾರೆ ಎನ್ನುತ್ತಾರೆ.