ಶಿರಸಿ: ಪೌರಾಡಳಿತ ನಿರ್ದೇಶನಾಲಯ ಜಾರಿಗೆ ತಂದಿರುವ ಇ-ಸ್ವತ್ತು ದಾಖಲೀಕರಣ ವ್ಯವಸ್ಥೆ ಬಗ್ಗೆ ಅಪಸ್ವರ ಕೇಳಿಬಂದಿದೆ. ಮಲೆನಾಡಿನ ನಗರಗಳಿಗೆ ತಲೆನೋವಾಗಿ ಪರಿಣಮಿಸಿದ್ದು, ಜನರ ಆಸ್ತಿ ಹಕ್ಕನ್ನೇ ಕಸಿದುಕೊಂಡಿದೆ ಎಂಬ ಆರೋಪ ಕೇಳಿಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜಾರಿಗೆ ತಂದಿರು ಇ-ಸ್ವತ್ತು ದಾಖಲೀಕರಣ ವ್ಯವಸ್ಥೆಯಿಂದ ಯಾವುದೇ ನಿವೇಶನದ ಮಾಲೀಕತ್ವ ವರ್ಗಾವಣೆ ಆಗುತ್ತಿಲ್ಲ. ತಂದೆ ಮನೆಯ ಹಕ್ಕನ್ನು ಮಗನ ಹೆಸರಿಗೂ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲವಂತೆ. ಇದರಿಂದ ಜನರು ಸಂಕಷ್ಟ ಎದುರಿಸುವಂತಾಗಿದೆ.
ಶಿರಸಿಯಲ್ಲಿ ಯಾವುದೇ ಮನೆ ಹಾಗೂ ಸರ್ಕಾರಿ ಕಚೇರಿಗಳಿಗೆ ನಗರ ಯೋಜನಾ ಪ್ರಾಧಿಕಾರ ಲೇಔಟ್ ರಚಿಸಿ ಎನ್‍ಒಸಿ ನೀಡಿಲ್ಲ. ಇದರಿಂದ ಸಮರ್ಪಕ ದಾಖಲೆ ಇಲ್ಲ ಎನ್ನುವ ಕಾರಣ ನೀಡಿ ಶಿರಸಿಯ 16,000 ಮನೆಗಳಲ್ಲಿ 14,000 ಮನೆಗಳು ಇ-ಸ್ವತ್ತು ತಂತ್ರಾಂಶದ ಅನಧಿಕೃತ ಕಾಲಂನಲ್ಲಿ ದಾಖಲಾಗಿವೆ. ಇದರಿಂದ ಲೇಔಟ್ ನಿಯಮಾವಳಿ ಜಾರಿ ಇಲ್ಲಿ ಅಸಾಧ್ಯ. ಹಾಗಾಗಿ ಶಿರಸಿಗೆ ಇದರಿಂದ ವಿನಾಯ್ತಿ ನೀಡಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಒಟ್ಟಿನಲ್ಲಿ ವ್ಯವಸ್ಥಿತವಾಗಿ ನಗರ ಅಭಿವೃದ್ಧಿಪಡಿಸುವ ಸದುದ್ದೇಶದಿಂದ ಜಾರಿಗೆ ಬಂದ ಇ- ಸ್ವತ್ತು ತಂತ್ರಾಂಶದಿಂದ ಇದೀಗ ಜನರಿಗೆ ಆಸ್ತಿ ಹಕ್ಕು ಕಳೆದುಕೊಳ್ಳುವ ಆತಂಕ ಎದುರಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕಿದೆ.