ಕಾರವಾರ: ಕೊರೊನಾ ಮೊದಲನೇ ಅಲೆ ಅವಧಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಹಾಟ್ ಸ್ಪಾಟ್ ಪ್ರದೇಶವಾಗಿ ಗುರುತಿಸಿಕೊಂಡಿತ್ತು. ಎರಡನೇ ಅಲೆಯಲ್ಲಿಯೂ ಸಹ ಸಾಕಷ್ಟು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದರೂ ಸಹ, ಲಸಿಕೆ ಪಡೆದುಕೊಳ್ಳಲು ಇಲ್ಲಿನ ಜನರು ಹಿಂದೇಟು ಹಾಕಿದ್ದರು. ಆದರೆ ವ್ಯಾಕ್ಸಿನ್ ಕುರಿತು ಇಲ್ಲಿನ ಸ್ಥಳೀಯ ಮುಸ್ಲಿಂ ಸಂಘಟನೆಗಳು ಅಭಿಯಾನ ನಡೆಸುವ ಜೊತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದ ಪರಿಣಾಮ ಇಂದು ಭಟ್ಕಳದಲ್ಲಿ ಲಸಿಕೆಗಾಗಿ ಜನ ಬರುತ್ತಿದ್ದಾರೆ.
ಓದಿ: ದುರ್ಬಲ ಸಿಎಂ, ದುರ್ಬಲ ಹೈಕಮಾಂಡ್: ಸಿದ್ದರಾಮಯ್ಯ ಕಿಡಿ
ಕೊರೊನಾ ಮೊದಲನೇ ಅಲೆಯಲ್ಲಿ ರಾಜ್ಯದ ಕೊರೊನಾ ಹಾಟ್ ಸ್ಪಾಟ್ ಆಗಿ ಗುರುತಿಸಿಕೊಂಡಿದ್ದ ಪ್ರದೇಶಗಳಲ್ಲಿ ಭಟ್ಕಳ ಪಟ್ಟಣ ಸಹ ಒಂದಾಗಿತ್ತು. ಎರಡನೇಯ ಅಲೆಯಲ್ಲಿಯೂ ಸಾಕಷ್ಟು ಪ್ರಕರಣಗಳು ಪತ್ತೆಯಾಗಿದ್ದು, ಸಾವು-ನೋವುಗಳು ಸಹ ಸಂಭವಿಸಿವೆ. ಆದರೂ ಸಹ ಪಟ್ಟಣದಲ್ಲಿ ಕೊರೊನಾ ಲಸಿಕೆ ಪಡೆದುಕೊಳ್ಳಲು ಜನರು ಮುಂದೆ ಬಾರದಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿತ್ತು.
ಇದೀಗ ಸ್ಥಳೀಯ ತಂಜೀಮ್ ಸಂಸ್ಥೆ ಸೇರಿದಂತೆ ಕೆಲ ಸಂಘಟನೆಗಳು ಕೊರೊನಾ ಲಸಿಕೆ ಕುರಿತು ಜಾಗೃತಿ ಮೂಡಿಸುತ್ತಿವೆ. ಅಲ್ಲದೇ ತಾವೇ ಸ್ವತಃ ವ್ಯಾಕ್ಸಿನೇಶನ್ ಕೇಂದ್ರಗಳನ್ನು ತೆರೆದಿದ್ದು, ಆರೋಗ್ಯ ಇಲಾಖೆ ಸಹಕಾರದೊಂದಿಗೆ ವ್ಯಾಕ್ಸಿನೇಶನ್ ಪ್ರಕ್ರಿಯೆಯನ್ನೂ ನಡೆಸುವ ಮೂಲಕ ಸ್ಥಳೀಯರಿಗೆ ಕೊರೊನಾ ಲಸಿಕೆ ಸುಲಭವಾಗಿ ಸಿಗುವಂತೆ ವ್ಯವಸ್ಥೆ ಕಲ್ಪಿಸಿಕೊಟ್ಟಿವೆ.
ಭಟ್ಕಳ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಕುಟುಂಬಗಳು ಹೆಚ್ಚಿದ್ದು, ಈ ಹಿಂದೆ ಕೊರೊನಾ ಲಸಿಕೆ ಕುರಿತು ಅಪಪ್ರಚಾರ ನಡೆಸಿದ್ದ ಪರಿಣಾಮ ಯಾರೂ ಸಹ ಲಸಿಕೆ ಪಡೆಯಲು ಮುಂದೆ ಬಂದಿರಲಿಲ್ಲ. ಹೀಗಾಗಿ ಇಲ್ಲಿನ ಮಜ್ಲಿಸೆ ತಂಜೀಮ್ ಸಂಸ್ಥೆ, ಮುಸ್ಲಿಂ ಫೆಡರೇಶನ್ ಹಾಗೂ ರಾಬಿತಾ ಸೊಸೈಟಿ ಒಟ್ಟಾಗಿ ಜನರಲ್ಲಿ ವ್ಯಾಕ್ಸಿನ್ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಿದೆ. ಅಲ್ಲದೇ ಸ್ವತಃ ತಾವೇ ಮುಂದೆ ನಿಂತು ಲಸಿಕೆ ಕೇಂದ್ರಗಳನ್ನು ತೆರೆಯುವ ಮೂಲಕ ಜನರನ್ನು ಪ್ರೋತ್ಸಾಹಿಸುತ್ತಿವೆ.
ಬುಧವಾರದಿಂದ ಲಸಿಕೆ ಅಭಿಯಾನ ಪ್ರಾರಂಭವಾಗಿದ್ದು, ಎರಡು ದಿನಗಳ ಅವಧಿಯಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಸದ್ಯ ಎಲ್ಲರೂ ಸಹ ವ್ಯಾಕ್ಸಿನ್ ಪಡೆದುಕೊಳ್ಳಲು ಮುಂದೆ ಬರುತ್ತಿದ್ದು, ಸಾಮಾಜಿಕ ಅಂತರ, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಲಸಿಕಾಕರಣವನ್ನು ಯಶಸ್ವಿಯಾಗಿಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳು ಮುಂದೆ ನಿಂತು ಲಸಿಕೆ ಕಾರ್ಯಕ್ಕೆ ಜನರ ಮನವೊಲಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.