ಕಾರವಾರ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಒಂದೇ ದಿನದಲ್ಲಿ ನಿರ್ಧಾರ ಮಾಡುವುದು ಕಷ್ಟ, ಆದರೆ ನಿಶ್ಚಯವಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಾಣ ಮಾಡೇ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕಾರವಾರದಲ್ಲಿ ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪೂಜಾರಿ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ಟೀಕೆ ಟಿಪ್ಪಣಿಗಳನ್ನು ಗಮನಿಸಿದ್ದೇವೆ. ನಾವು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ.
ಮುಖ್ಯಮಂತ್ರಿಗಳು ಖಾಸಗಿಯಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದಿದ್ದರೂ ಅದಕ್ಕೆ ಅಗತ್ಯವಿರುವ ಭೂಮಿ, ರಸ್ತೆ ಸಂಪರ್ಕ ಹಾಗೂ ನೀರಿನ ವ್ಯವಸ್ಥೆ ಜೊತೆಗೆ ಅಗತ್ಯವಿದ್ದಲ್ಲಿ ಹಣಕಾಸಿನ ನೆರವನ್ನೂ ನೀಡುವ ಭರವಸೆಯನ್ನು ನೀಡಿದ್ದಾರೆ. ಹೀಗಾಗಿ ಈಗ ಆಗತ್ತೆ, ಇಲ್ಲ ಆಗಲ್ಲ ಎನ್ನುವುದನ್ನು ಹೇಳುವುದು ಸರಿಯಲ್ಲ, ಆಸ್ಪತ್ರೆಯನ್ನು ನಿರ್ಮಿಸುವುದು ಸರ್ಕಾರದ ಬದ್ಧತೆ ಎಂದರು.
ಜಿಲ್ಲೆಗೆ ಮುಖ್ಯಮಂತ್ರಿಯನ್ನು ಕರೆಯಿಸುವ ವಿಚಾರವಾಗಿ ಮಾತನಾಡಿದ ಅವರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನ ಹಾಗೂ ಉದ್ಘಾಟನೆ ಮಾಡುವ ಕಾರ್ಯಕ್ರಮಗಳಿವೆ. ಹೀಗಾಗಿ ಅಧಿವೇಶನದ ಬಳಿಕ ಮುಖ್ಯಮಂತ್ರಿಗಳು ಜಿಲ್ಲೆಗೆ ಬರುತ್ತಾರೆ ಎಂದರು.
ಆರ್ಥಿಕ ಇಲಾಖೆ ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಯೋಜನೆ ಬಿಡುವುದು ಸಾಧ್ಯವಿಲ್ಲ. ಆರ್ಥಿಕ ಇಲಾಖೆಯನ್ನು ಒಪ್ಪಿಸುವವರೆಗೆ ಮುಖ್ಯಮಂತ್ರಿಗಳನ್ನು ಕಾಡುತ್ತೇವೆ. ಆರ್ಥಿಕ ಇಲಾಖೆಯಿಂದ ಅನುಮೋದನೆಯನ್ನು ತಂದೇ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಆ್ಯಂಬುಲೆನ್ಸ್ ಅಪಘಾತ.. ಮೃತರ ಮನೆಗೆ ಸಚಿವ ಶ್ರೀನಿವಾಸ ಪೂಜಾರಿ ಭೇಟಿ, ಸಾಂತ್ವನ