ಕಾರವಾರ (ಉ.ಕ): ದೇಶಾದ್ಯಂತ ಲಾಕ್‌ಡೌನ್ ಜಾರಿ ಹಿನ್ನೆಲೆ ಗೋವಾ ರಾಜ್ಯದ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ಕಾರವಾರದಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ತಾಲೂಕಿನ ಮಾಜಾಳಿಯ ಯೂನಿಯನ್ ಹೈಸ್ಕೂಲಿನಲ್ಲಿ ಮೇ 23 ರಿಂದ ಎಸ್ಎಸ್ಎಲ್‌ಸಿ ಪರೀಕ್ಷೆಗಳು ಪ್ರಾರಂಭವಾಗಿದ್ದು, ಗಡಿಭಾಗ ಕಾರವಾರದ ವಿದ್ಯಾರ್ಥಿಗಳು ಇಲ್ಲಿಯೇ ಪರೀಕ್ಷೆ ಬರೆಯುತ್ತಿದ್ದಾರೆ.
ಲಾಕ್‌ಡೌನ್ ಹಿನ್ನೆಲೆ ಅಂತಾರಾಜ್ಯ ಬಸ್ ಸಂಚಾರ ಇಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದ್ದು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಸ್ಥಳೀಯವಾಗಿಯೇ ಪರೀಕ್ಷೆ ಬರೆಯಲು ರಾಜ್ಯ ಸರ್ಕಾರದೊಂದಿಗೆ ಗೋವಾ ಸರ್ಕಾರ ಮಾತುಕತೆ ನಡೆಸಿ ಅವಕಾಶ ಮಾಡಿಕೊಟ್ಟಿದೆ.
ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳು ಸ್ಯಾನಿಟೈಸರ್ ಮೂಲಕ ಕೈ ಶುಚಿಗೊಳಿಸಿಕೊಂಡು, ಮಾಸ್ಕ್ ಧರಿಸಿ ಪರೀಕ್ಷೆಯನ್ನು ಬರೆದಿದ್ದಾರೆ. ಗೋವಾದ ಶಿಕ್ಷಕರು ಪ್ರಶ್ನೆ ಪತ್ರಿಕೆಗಳನ್ನ ತಂದು ಇಲ್ಲಿನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸುತ್ತಿದ್ದಾರೆ. ಇದರಿಂದ ಇಲ್ಲಿನ ಸ್ಥಳೀಯ ವಿದ್ಯಾರ್ಥಿಗಳಿಗೂ ಅನುಕೂಲವಾಗಿದೆ.
ಗೋವಾ ಶಾಲೆಯ ಸ್ಥಳೀಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸ್ಥಳೀಯವಾಗಿಯೇ ಅವಕಾಶ ಮಾಡಿಕೊಟ್ಟಿದ್ದಕ್ಕೆ ಪಾಲಕರು ಸಹ ಸಂತಸ ವ್ಯಕ್ತಪಡಿಸಿದ್ದಾರೆ.