ಭಟ್ಕಳ: ಕಳೆದ ಪಿಯುಸಿ ಪರೀಕ್ಷೆಯ ಫಲಿತಾಂಶದಿಂದ ತೃಪ್ತಳಾಗದ ಇಲ್ಲಿನ ಮುರುಡೇಶ್ವರ ಆರ್.ಎನ್.ಎಸ್. ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ ಒಂದೇ ವಿಷಯದಲ್ಲಿ 22 ಅಧಿಕ ಅಂಕ ಪಡೆದುಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ.
ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಹೇಮಾ ಗಿಡ್ಡನಾಯ್ಕ ಕನ್ನಡದಲ್ಲಿ 68, ಇಂಗ್ಲೀಷ್‍ನಲ್ಲಿ 90, ಭೌತಶಾಸ್ತ್ರದಲ್ಲಿ 89, ರಸಾಯನ ಶಾಸ್ತ್ರದಲ್ಲಿ 87, ಗಣಿತದಲ್ಲಿ 93, ಜೀವಶಾಸ್ತ್ರದಲ್ಲಿ 81 ಅಂಕಗಳೊಂದಿಗೆ ಒಟ್ಟು 508 ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಳು. ಆದರೆ ಕನ್ನಡ ಭಾಷಾ ವಿಷಯದಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕೆ ಬೇಸರಗೊಂಡ ಆಕೆ ಮರು ಮೌಲ್ಯಮಾಪನದ ಮೊರೆ ಹೋಗಿದ್ದಳು.
ಈಗ 22 ಅಧಿಕ ಅಂಕಗಳೊಂದಿಗೆ ಕನ್ನಡ ಭಾಷಾ ವಿಷಯಕ್ಕೆ 90 ಅಂಕ ಲಭಿಸಿದಂತಾಗಿದ್ದು, ಒಟ್ಟು ಅಂಕ 530 (88.33%) ಅಂಕಗಳಿಗೆ ಏರಿಕೆಯಾಗಿದೆ. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರು, ಪ್ರಾಚಾರ್ಯರು, ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ.