ಕಾರವಾರ: ರಾಜ್ಯ ಸರ್ಕಾರ ದಿನಕ್ಕೊಂದು ಆದೇಶ ಹೊರಡಿಸುತ್ತಿದ್ದು, ಸ್ವತಃ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಪರಿಷ್ಕೃತ ಆದೇಶ ತಿಳಿಯದೆ ಗೊಂದಲಕ್ಕಿಡಾದ ಘಟನೆ ನಿನ್ನೆ ಕಾರವಾರದಲ್ಲಿ ನಡೆದಿದೆ.
ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕೋವಿಡ್ ನಿಯಂತ್ರಣ ಹಾಗೂ ಮುನ್ನೆಚ್ಚರಿಕಾ ಕ್ರಮದ ಕುರಿತು ವಿಡಿಯೋ ಸಂವಾದ ಬಳಿಕ ಸುದ್ದಿಗೋಷ್ಠಿ ನಡೆಸಿದ್ದರು. ಬುಧವಾರ ರಾತ್ರಿ ಕರ್ಫ್ಯೂ ಕುರಿತು ಆದೇಶ ಹೊರಡಿಸಿದ್ದ ಸರ್ಕಾರ, ಕರ್ಫ್ಯೂ ಅವಧಿಯಲ್ಲಿ ಅಂದರೆ ರಾತ್ರಿ 9ರಿಂದ ಬೆಳಿಗ್ಗೆ 6 ಹಾಗೂ ಶನಿವಾರ ಮತ್ತು ಭಾನುವಾರ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಸಂಪೂರ್ಣವಾಗಿ ಅಂಗಡಿ- ಮುಂಗಟ್ಟು, ಸೇವೆಗಳಿಗೆ ನಿರ್ಬಂಧಿಸಿತ್ತು. ಆದರೆ ನಿನ್ನೆ ಮಧ್ಯಾಹ್ನ ಪರಿಷ್ಕೃತ ಆದೇಶ ಹೊರಡಿಸಿ, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿ, ಮುಂಗಟ್ಟುಗಳನ್ನು ಮೇ 4ರವರೆಗೆ ಮುಚ್ಚುವಂತೆ ಆದೇಶಿಸಲಾಗಿದೆ.
ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳು ಹೊಟೇಲ್‌ನವರ ಜೊತೆಗೂಡಿ ಸ್ಟೆಪ್ ಡೌನ್ ಆಸ್ಪತ್ರೆ ಸ್ಥಾಪನೆಗೆ ಸರ್ಕಾರ ಆದೇಶ
ವಿವಿಧ ಜಿಲ್ಲೆಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಂಗಡಿಗಳನ್ನು ಏಕಾಏಕಿ ಮುಚ್ಚಿಸಿದ್ದಾರೆ. ಇದರಿಂದಾಗಿ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದ್ದು, ಅಂಗಡಿ ಮಾಲೀಕರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಸುದ್ದಿಗೋಷ್ಠಿ ವೇಳೆ ಸಚಿವ ಶಿವರಾಮ್ ಹೆಬ್ಬಾರ್ ಅವರನ್ನು ಪ್ರಶ್ನಿಸಿದರೆ ಆ ರೀತಿಯ ಯಾವ ಆದೇಶವೂ ಇಲ್ಲ. ಕರ್ಫ್ಯೂ ಅವಧಿಯಲ್ಲಿ ಮಾತ್ರ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೆಲ್ಲವೂ ಬಂದ್ ಇರಲಿದೆ. ಅಧಿಕಾರಿಗಳು ಕೂಡ ಆದೇಶ ಮೀರಿ ವರ್ತಿಸಬಾರದು ಎಂದು ಹೇಳಿದರು.
ಅಂಕೋಲಾ ತಾಲ್ಲೂಕು ಅಧಿಕಾರಿಗಳು ಎಲ್ಲಾ ಅಂಗಡಿಗಳನ್ನು ಮುಚ್ಚುವಂತೆ ಪ್ರಕಟಣೆ ನೀಡಿದ್ದನ್ನು ತೋರಿಸಿದಾಗಿಯೂ ಕೂಡ ಒಪ್ಪದ ಸಚಿವರು, ಈ ರೀತಿ ಮಾಡಿರೋದು ಸರಿಯಲ್ಲ. ಸರ್ಕಾರದ ಆದೇಶವೇ ಅಂತಿಮ ಎಂದು ಡಿಸಿ ನೀಡಿದ ನಿನ್ನೆ ರಾತ್ರಿಯ ಆದೇಶ ತೋರಿಸಿದರು. ಇನ್ನು ಇದೇ ವೇಳೆ ಜಿಲ್ಲಾಡಳಿತದ ಅಧಿಕಾರಿಗಳಿಗೂ ಅಂಗಡಿಗಳನ್ನೆಲ್ಲ ಮುಚ್ಚಬೇಕೆ ಎಂದು ಕೇಳಿದ್ದಕ್ಕೆ, ಆ ರೀತಿಯ ಯಾವುದೇ ಆದೇಶ ನಮಗೆ ಬಂದಿಲ್ಲ ಎಂದಿದ್ದಾರೆ.
ಒಟ್ಟಾರೆ ಸರ್ಕಾರ ದಿನಕ್ಕೊಂದು ಗಂಟೆಗೊಂದು ಆದೇಶ ಹೊರಡಿಸುತ್ತಿರುವುದು ಜನ ಸಾಮಾನ್ಯರು ಮಾತ್ರವಲ್ಲದೆ ಜನಪ್ರತಿನಿಧಿಗಳು, ಅಧಿಕಾರಿಗಳು ಗೊಂದಲಕ್ಕಿಡಾಗುತ್ತಿದ್ದಾರೆ. ಸದ್ಯ ಸರ್ಕಾರ ತನ್ನ ಪರಿಷ್ಕೃತ ಆದೇಶದಲ್ಲಿ, ಅಗತ್ಯ ಸೇವೆಗಳು ಹಾಗೂ ಆದೇಶದಲ್ಲಿ ನಮೂದಿಸಿದ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಕ್ಕೂ ನಿರ್ಬಂಧ ಹೇರಿದೆ.