ಭಟ್ಕಳ: ನವರಾತ್ರಿಯ ಈ ಪರ್ವ ಕಾಲದಲ್ಲಿ ಭಕ್ತರು ಹೆಚ್ಚಾಗಿ ದೇವಿ ದೇವಸ್ಥಾನಗಳಿಗೆ ಭೇಟಿ ನೀಡಿ ತಮ್ಮ ಬೇಡಿಕೆಯನ್ನು ಈಡೇರಿಸು ಎಂಬ ಪ್ರಾರ್ಥನೆಯ ಜೊತೆಗೆ ಭಕ್ತಿಯಿಂದ ನವರಾತ್ರಿಯ ಪೂಜೆ-ಪುನಸ್ಕಾರ ನೆರವೇರಿಸುತ್ತಾರೆ. ಈ ನವರಾತ್ರಿಯ ಸಂದರ್ಭದಲ್ಲಿ ದೇವಿಯು ಸಂತುಷ್ಟಗೊಂಡು ಎಲ್ಲಾ ಭಕ್ತರನ್ನು ಹರಸುತ್ತಾಳೆಂಬ ನಂಬಿಕೆ ಇದೆ.
ಭಟ್ಕಳ ತಾಲೂಕಿನಲ್ಲಿಯೂ ಈ ನವರಾತ್ರಿ ವೈಭವದಿಂದ ನಡೆಯುತ್ತಿದ್ದು, ಸೆಪ್ಟೆಂಬರ್ 29ರಿಂದ ಆರಂಭವಾದ ನವರಾತ್ರಿ ಉತ್ಸವ ತಾಲೂಕಿನ ವಿವಿಧ ಕಡೆಯಲ್ಲಿನ ದೇವಿ ದೇವಸ್ಥಾನದಲ್ಲಿ ನಡೆಯುತ್ತಿದೆ. ಭಟ್ಕಳ ಪಟ್ಟಣ ಈಗಾಗಲೇ ಶಕ್ತಿದೇವಿ ದೇವಾಲಯಗಳ ತಾಣವಾಗಿದೆ. ಪುರಾತನ ಕಾಲದಲ್ಲಿ ಇದು ದೇವಾಲಯಗಳ ಬೀಡಾಗಿತ್ತು ಎನ್ನುವುದಕ್ಕೆ ಅನೇಕ ಪುರಾವೆಗಳಿವೆ.
ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಪ್ರಸಿದ್ಧಿ ಪಡೆದಿರುವ ಭಟ್ಕಳ ತಾಲೂಕಿನ ಭೀಮಾ ನದಿಯ ತಟದಲ್ಲಿನ ರಮಣೀಯ ನಿಸರ್ಗ ತಾಣದಲ್ಲಿ ನೆಲೆಸಿರುವ ಕಡವಿನಕಟ್ಟೆ ಶ್ರೀ ಜಗನ್ಮಾತಾ ದುರ್ಗಾಪರಮೇಶ್ವರಿ ಅಮ್ಮನವರ ನವರಾತ್ರಿಯ ವಿಶೇಷ ಪೂಜೆಯ ಜೊತೆಗೆ ಅನ್ನ ಸಂತರ್ಪಣೆ, ಹೋಮ ಹವನಾದಿಗಳು ನಡೆಯುತ್ತಿವೆ. ಇಲ್ಲಿಯ ಊರಿನ ಭಕ್ತರ ಜೊತೆಗೆ ಹಾಗೂ ಪರ ಊರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.
ಈ ದೇವಸ್ಥಾನವು ಪ್ರಾಚೀನ ಕಾಲದ ದೇವಸ್ಥಾನವಾಗಿದ್ದು, ಸುಮಾರು 400 ವರ್ಷದ ಇತಿಹಾಸ ಹೊಂದಿರುವ ಶಕ್ತಿ ಕ್ಷೇತ್ರವಾಗಿದೆ. ಈ ದೇವಸ್ಥಾನ ಋಷಿ-ಮುನಿಗಳಿಂದ ಪ್ರತಿಷ್ಠಾಪನೆಗೊಂಡಿದ್ದು, ಈ ಹಿಂದೆ ಶ್ರೀಧರ ಸ್ವಾಮಿ ಈ ಸ್ಥಳಕ್ಕೆ ಬಂದು ತಪಸ್ಸು ಮಾಡಿರುವುದರಿಂದ ಈ ಸ್ಥಳವನ್ನು ಶಕ್ತಿಸ್ಥಳ ಎನ್ನಲಾಗುತ್ತೆ. ಈ ದೇವಸ್ಥಾನಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಭಕ್ತಾದಿಗಳು ಬಂದು ಭೂತ-ಪ್ರೇತದ ತೊಂದರೆ, ಆರೋಗ್ಯ ಸಮಸ್ಯೆ ಮುಂತಾದ ಕಷ್ಟಗಳನ್ನು ನಿವಾರಣೆ ಮಾಡಿಕೊಂಡು ಹೋಗುತ್ತಾರಂತೆ.