ಹೊನ್ನಾವರ: ತಾಲೂಕಿನ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ್ದ ಸೋಲಾರ್ ಬೀದಿ ದೀಪಗಳ ಬ್ಯಾಟರಿ ಕಳ್ಳತನಕ್ಕೆ ಸಂಬಂಧಿಸಿದಂತೆ ಮಂಕಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಾನಗೋಡ ಮೂಲದ ಸಂಕೇತ್ ನಾಗಪ್ಪ ಗೌಡ (24), ಸಂದೀಪ ನಾಗಪ್ಪ ಗೌಡ(21), ಮಾವಿನಕುರ್ವಾದ ಮಾರುತಿ ಮಂಜು ಗೌಡ(25), ಪಡುಕುಳಿಯ ಪ್ರದೀಪ ನಾಗಪ್ಪ ಗೌಡ(24), ಅಭಿಷೇಕ ಈಶ್ವರ ಗೌಡ (18) ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರೂ ಇಪ್ಪತ್ತರಿಂದ ಇಪ್ಪತೈದು ವರ್ಷದ ಯುವಕರಾಗಿದ್ದು, ಶೋಕಿ ಬದುಕಿನ ದುಂದು ವೆಚ್ಚ ಯುವಕರನ್ನು ಅಡ್ಡದಾರಿಗಿಳಿಸಿರಬಹುದು ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.
ಸೋಲಾರ್ ಬ್ಯಾಟರಿ ಕಳ್ಳತನ ಆರೋಪಿಗಳ ಬಂಧನ ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಸಾರ್ವಜನಿಕರ ಅನುಕೂಲಕ್ಕಾಗಿ ಅಳವಡಿಸಿದ್ದ ಸೋಲಾರ್ ದೀಪದ ಬ್ಯಾಟರಿಗಳು ಪದೇ ಪದೆ ಕಳ್ಳತನವಾಗುತ್ತಿರುವ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ದಿನೇಶ ಆಚಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿಂದೆ ಮೂರು ಬಾರಿ ಬ್ಯಾಟರಿ ಕಳ್ಳತನವಾಗಿದ್ದು, ನಾಲ್ಕನೇ ಸಲ ಹೊಸ ಬ್ಯಾಟರಿ ಅಳವಡಿಸಿದ ನಂತರ ಆಸ್ಪತ್ರೆಯ ಸಿಬ್ಬಂದಿ ಹಾಗೂ ಪೊಲೀಸರು ಮಫ್ತಿಯಲ್ಲಿ ಕಳ್ಳರಿಗಾಗಿ ಕಾದು ಕುಳಿತು ಹಿಡಿದಿದ್ದಾರೆ ಎನ್ನಲಾಗಿದೆ. ದಿನಾಂಕ 29-06-2020 ರಾತ್ರಿ 11-30ರ ಸುಮಾರಿಗೆ ಬೈಕ್‍ನಲ್ಲಿ ಬಂದ ಇಬ್ಬರು ಯುವಕರು ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಂಪೌಂಡ್ ಒಳಗಿರುವ ಸೋಲಾರ್ ದೀಪದ ಬ್ಯಾಟರಿಯನ್ನು ಕಳ್ಳತನ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಇಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೊಪಿಗಳು ತಮ್ಮ ಹೆಸರನ್ನು ಸಂಕೇತ ನಾಗಪ್ಪ ಗೌಡ, ಸಂದೀಪ ನಾಗಪ್ಪ ಗೌಡ ಎಂದು ತಿಳಿಸಿದ್ದಾರೆ. ಅಲ್ಲದೆ ಈ ದಂಧೆಯಲ್ಲಿ ಇನ್ನೂ ಹಲವರು ಶಾಮೀಲಾಗಿರುವುದಾಗಿ ಬಾಯ್ಬಿಟ್ಟಿದ್ದಾರೆ. ಬಂಧಿತ ಆರೋಪಿಗಳು ನೀಡಿದ ಮಾಹಿತಿಯನ್ನಾಧರಿಸಿ ಪಿಎಸ್ಐ ಪಿ.ಬಿ.ಕೊಣ್ಣೂರ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು, ಮಾವಿನಕುರ್ವಾದ ಮಾರುತಿ ಮಂಜು ಗೌಡ, ಪಡುಕುಳಿಯ ಪ್ರದೀಪ ನಾಗಪ್ಪ ಗೌಡ, ಅಭಿಷೇಕ ಈಶ್ವರ ಗೌಡ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.