ಶಿರಸಿ: ಗೋವಾದಿಂದ ವ್ಯಕ್ತಿಯೋರ್ವರನ್ನು ಅಪಹರಣ ಮಾಡಿ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಖತರ್ನಾಕ್ ಗ್ಯಾಂಗ್ವೊಂದನ್ನು ಶಿರಸಿ ಪೊಲೀಸರು ಬಂಧಿಸಿ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ.
ಗೋವಾ ಮೂಲದ ಅಂಬರೀಶ್ ಪ್ರತಾಪ್ ಸಿಂಗ್ (31) ರಕ್ಷಿಸಲಾದ ವ್ಯಕ್ತಿ. ಸುರತ್ಕಲ್ನ ಮಹಮ್ಮದ್ ಜಾವೇದ್ (36), ಅನೀಸ್ ಮಹಮ್ಮದ್ (46), ನವಾಜ್ (35), ಮಹಮ್ಮದ್ ಮುಸ್ತುಫ್ (30) ಹಾಗೂ ಸಾಕೀಮ್ ಸುಲೇಮಾನ್ (25) ಬಂಧಿತ ಆರೋಪಿಗಳು.
ಅಂಬರೀಶ್ ಗ್ಯಾಸ್ ಕಂಪನಿಯೊಂದರ ಪ್ರಮುಖರಾಗಿದ್ದು, ಇವರ ಜೊತೆ ಹಣಕಾಸು ವಿಚಾರಕ್ಕೆ ಆರೋಪಿಗಳು ವೈಮನಸ್ಸು ಹೊಂದಿದ್ದರಂತೆ. ಇದೇ ಕಾರಣಕ್ಕೆ ಇವರನ್ನು ಅಪಹರಣ ಮಾಡಿದ್ದರು ಎನ್ನಲಾಗುತ್ತಿದೆ.
ಘಟನೆ ಹಿನ್ನೆಲೆ:
ಹಣಕಾಸು ವಿಚಾರದಲ್ಲಿ ಗಲಾಟೆಯಾಗಿ ಅಂಬರೀಶ್ ಅವರನ್ನು ಗುಂಪೊಂದು ಅಪಹರಣ ಮಾಡಿ ಹುಬ್ಬಳ್ಳಿ ಕಡೆಗೆ ಹೋಗುತ್ತಿತ್ತು. ಈ ಸಂಬಂಧ ಗೋವಾ ಪೊಲೀಸರು ಶಿರಸಿ ಠಾಣೆಗೆ ಮಾಹಿತಿ ನೀಡಿದ್ದರು. ಪರಿಣಾಮ ಅಪಹರಣಕಾರರನ್ನು ಶಿರಸಿ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಆರೋಪಿಗಳನ್ನು ಗೋವಾ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.