ಶಿರಸಿ: ನಗರದ ಹೊರವಲಯದಲ್ಲಿ ಮಾರಕಾಸ್ತ್ರ ಹಾಗೂ ಖಾರದ ಪುಡಿ ಹಿಡಿದು ವಾಹನ ಸವಾರರನ್ನು ತಡೆದು ದರೋಡೆ ಮಾಡುತ್ತಿದ್ದ ಐವರ ಮೇಲೆ ಶಿರಸಿ ಮಾರುಕಟ್ಟೆ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಡಿಎಸ್ಪಿ ಜಿ.ಟಿ.ನಾಯಕ, ಮಾರುಕಟ್ಟೆ ಠಾಣೆ ಪಿಎಸ್ಐ ನಾಗಪ್ಪ ಬಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ದರೋಡೆಗೆ ಸಂಚು ರೂಪಿಸಿದ್ದ ಗೋವಾ ಮೂಲದ ಅಲೆಕ್ಸ್ ರೋಡ್ರಿಗಸ್ ಹಾಗೂ ಬ್ರೈನ್ ಅಲ್ಮೇಡಾ ಎಂಬುವವರನ್ನು ಬಂಧಿಸಿದ್ದಾರೆ.
ಇನ್ನು ಉಳಿದ ತಂಡದ ಸದಸ್ಯರಾದ ಡೆವಿಡ್ ಫರ್ನಾಂಡೀಸ್, ಶಿರಸಿ ಅಯ್ಯಪ್ಪನಗರದ ಮಂಜುನಾಥ ಪಾಠಣಕರ್, ಕೋಟನಗೇರಿಯ ಪವನ ಪಾಲೇಕರ್ ಪರಾರಿಯಾಗಿದ್ದಾರೆ. ಬಂಧಿತರಿಂದ 4950 ರೂ. ಮೌಲ್ಯದ ಗಾಂಜಾ, 1 ದ್ವಿಚಕ್ರ ವಾಹನ, 2 ಮೊಬೈಲ್ ಹಾಗೂ ಖಾರದ ಪುಡಿ, ಕಬ್ಬಿಣದ ರಾಡ್ ಹಾಗೂ ಬಡಿಗೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.