ಶಿರಸಿ : ರಾಜ್ಯದ 63 ಸ್ಥಳೀಯ ಸಂಸ್ಥೆಗಳಿಗೆ ಈಗಾಗಲೇ ಚುನಾವಣೆ ದಿನಾಂಕ ಪ್ರಕಟಿಸಲಾಗಿದ್ದು, ಉತ್ತರ ಕನ್ನಡದ ಸಿದ್ದಾಪುರ ಪಟ್ಟಣ ಪಂಚಾಯಿತಿಯ 15 ಸ್ಥಾನಗಳಿಗೂ ಚುನಾವಣೆ ಘೋಷಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಹಾಗೂ ಹೊನ್ನಾವರ ಪಟ್ಟಣ ಪಂಚಾಯತ್ ಮತ್ತು ಭಟ್ಕಳ ಪುರಸಭೆಗೆ ಚುನಾವಣೆ ಘೋಷಣೆಯಾಗಿದೆ. 15 ಕ್ಷೇತ್ರಗಳಿಂದ 45 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆ. ಮೇ. 29 ರಂದು ಮತದಾನ ನಡೆಯಲಿದೆ. ಸಿದ್ದಾಪುರ ಪಟ್ಟಣ ಪಂಚಾಯತ್ನಲ್ಲಿ ಬಿಜೆಪಿ 14 , ಕಾಂಗ್ರೆಸ್ ಮತ್ತು ಜೆಡಿಎಸ್ 14 ಹಾಗೂ ಇತರೆ 17 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಬಿಜೆಪಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದೆ. ಕಾಂಗ್ರೆಸ್ 11 ಕ್ಷೇತ್ರ ಹಾಗೂ ಜೆಡಿಎಸ್ 03 ಕ್ಷೇತ್ರದಲ್ಲಿ ಸ್ಪರ್ಧಿಸಿದೆ.
ಜೆಡಿಎಸ್ಗೆ ಬಿಟ್ಟು ಕೊಡಲಾದ ಹೆಚ್ಚುವರಿ ವಾರ್ಡ್ನಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಲಾಗಿದೆ. ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 14,204 ಜನಸಂಖ್ಯೆಯಿದೆ. ಅದರಲ್ಲಿ 5,589 ಪುರುಷ ಹಾಗೂ 5,390 ಮಹಿಳಾ ಮತದಾರರು ಸೇರಿ 10,979 ಮಂದಿ ಈ ಬಾರಿ ಮತ ಚಲಾವಣೆ ಮಾಡಲಿದ್ದಾರೆ. ಇನ್ನು 15 ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ. 3 ಕ್ರಿಟಿಕಲ್ ಮತ್ತು 12 ನಾನ್ ಕ್ರಿಟಿಕಲ್ ಮತಗಟ್ಟೆ ಎಂದು ಗುರುತಿಸಲಾಗಿದೆ.
ಕಳೆದ ಬಾರಿ ಬಿಜೆಪಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಅಧಿಕಾರ ಹಿಡಿದಿತ್ತು. ಬಿಜೆಪಿಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಕೆ.ಜೆ ನಾಯ್ಕ ಪಟ್ಟಣ ಪಂಚಾಯತ್ ವಾರ್ಡ್ ನಂ. 10 ರಿಂದ ಸ್ಪರ್ಧಿಸಿದ್ದಾರೆ. ಈಗಾಗಲೇ ಮೈತ್ರಿ ಪಕ್ಷ ಮತ್ತು ಬಿಜೆಪಿಯಿಂದ ಪ್ರಚಾರದ ಭರಾಟೆ ಜೋರಾಗಿ ಸಾಗಿದೆ. ಪಕ್ಷೇತರ ಅಭ್ಯರ್ಥಿಗಳು ಯಾರಿಗೂ ಕಡಿಮೆಯಿಲ್ಲ ಎಂಬಂತೆ ಮತದಾರರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಅಂತಿಮವಾಗಿ ವಿಜಯದ ಮಾಲೆ ಯಾರಿಗೆ ಒಲಿಯಲಿದೆ ಎಂಬುವುದನ್ನು ಕಾದು ನೋಡಬೇಕಿದೆ.