ಕಾರವಾರ : ಒಂದೆಡೆ ಕರಾವಳಿ ತೀರ ಇನ್ನೊಂದೆಡೆ ಪಶ್ಚಿಮ ಘಟ್ಟಗಳ ಸರಣಿ ಹೊಂದಿರುವ ಉತ್ತರಕನ್ನಡ ಜಿಲ್ಲೆಯನ್ನು ವಿಭಜಿಸಬೇಕು ಎನ್ನುವ ಕೂಗು ಹಿಂದಿನಿಂದಲೂ ಕೇಳಿ ಬರುತ್ತಿದೆ. ಬಳ್ಳಾರಿಯ ವಿಜಯನಗರವನ್ನು ನೂತನ ಜಿಲ್ಲೆಯಾಗಿ ಘೋಷಿಸಿದ ಬಳಿಕ ಶಿರಸಿ ಜಿಲ್ಲಾ ಕೂಗು ಸಹ ಜೋರಾಗಿದೆ. ಹೋರಾಟದ ಮೂಲಕ ಒತ್ತಡ ಹೇರಲು ಮುಂದಾಗಿದ್ದಾರೆ.
ಓದಿ: ಬೆಳ್ಳಂದೂರು ಅಪಾರ್ಟ್ಮೆಂಟ್ನಲ್ಲಿ ಮುಂದುವರೆದ ಕೋವಿಡ್ ಟೆಸ್ಟ್: ಇಂದು 405 ಜನರ ಪರೀಕ್ಷೆ
ರಾಜ್ಯದಲ್ಲಿಯೇ ಭೌಗೋಳಿಕವಾಗಿ ವಿಶಾಲವಾಗಿರುವುದರ ಜೊತೆಗೆ 12 ತಾಲೂಕುಗಳನ್ನು ಹೊಂದುವ ಮೂಲಕ ಉತ್ತರಕನ್ನಡ ಅತಿದೊಡ್ಡ ಜಿಲ್ಲೆ ಎನಿಸಿದೆ. ವಿಶಾಲ ಕರಾವಳಿ, ಪಶ್ಟಿಮಘಟ್ಟ ಪ್ರದೇಶದ ಜೊತೆಗೆ ಬಯಲು ಸೀಮೆಯನ್ನೂ ಹೊಂದಿರುವ ಮೂಲಕ ಉತ್ತರಕನ್ನಡ ವಿಭಿನ್ನ ಜಿಲ್ಲೆಯಾಗಿದೆ.
ಆದರೆ, ಜಿಲ್ಲಾ ಕೇಂದ್ರ ಕಾರವಾರ, ಜಿಲ್ಲೆಯ ಒಂದು ತುದಿಯಲ್ಲಿದೆ. ಘಟ್ಟದ ಮೇಲಿನ ಜನರಿಗೆ ತಲುಪಲು ಸಾಕಷ್ಟು ದೂರದಲ್ಲಿದೆ. ಈ ಕಾರಣದಿಂದಾಗಿ ಘಟ್ಟದ ಮೇಲಿನ ತಾಲೂಕುಗಳನ್ನು ಸೇರಿಸಿ ಶಿರಸಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಬೇಕು ಎನ್ನುವ ಕೂಗು ಹಿಂದಿನಿಂದಲೂ ಕೇಳಿ ಬರುತ್ತಿದೆ. ಇದೀಗ ಪ್ರತ್ಯೇಕ ಜಿಲ್ಲಾ ಕೂಗು ಇತರೆ ತಾಲೂಕುಗಳಿಗೂ ಹಬ್ಬಿದೆ.
ಈ ಮೊದಲು ಕೇವಲ ಶಿರಸಿ ಭಾಗದ ಕೆಲವರು ಮಾತ್ರ ಪ್ರತ್ಯೇಕ ಜಿಲ್ಲೆ ಮಾಡುವಂತೆ ಬೇಡಿಕೆ ಇಟ್ಟಿದ್ದರು. ಇದೀಗ ಪ್ರತ್ಯೇಕ ಜಿಲ್ಲಾ ಕೇಂದ್ರದ ಕೂಗಿನ ಜೊತೆಗೆ ಹಳಿಯಾಳ ಹಾಗೂ ಯಲ್ಲಾಪುರ ತಾಲೂಕುಗಳನ್ನು ಜಿಲ್ಲಾ ಕೇಂದ್ರವನ್ನಾಗಿಸಿ ಎಂದು ಬೇಡಿಕೆ ಇಡಲು ಮುಂದಾಗಿದ್ದಾರೆ. ಶಿರಸಿ ಅಭಿವೃದ್ಧಿ ಹೊಂದಿದ ತಾಲೂಕಾಗಿದ್ದರೂ ಸಹ ಹೆದ್ದಾರಿ, ರೈಲ್ವೆ ಸೌಲಭ್ಯಗಳು ಇಲ್ಲ.
ಇನ್ನು, ಉತ್ತರಕನ್ನಡ ಜಿಲ್ಲೆ 12 ತಾಲೂಕುಗಳನ್ನ ಹೊಂದಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳು ಕರಾವಳಿಯಲ್ಲಿವೆ. ಇನ್ನುಳಿದ ಶಿರಸಿ, ಸಿದ್ದಾಪುರ, ಯಲ್ಲಾಪುರ, ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ಘಟ್ಟದ ಮೇಲೆ ಇವೆ.
ಆದರೆ, ಇದೀಗ ಹಳಿಯಾಳ ಹಾಗೂ ಯಲ್ಲಾಪುರದಲ್ಲೂ ಜಿಲ್ಲಾ ವಿಭಜನೆ ಕೂಗು ಕೇಳಿ ಬಂದಿದೆ. ಆ ತಾಲೂಕುಗಳೂ ಸಹ ಜಿಲ್ಲಾ ಕೇಂದ್ರ ತಮ್ಮದಾಗಬೇಕು ಎಂದು ಒತ್ತಾಯಿಸಲು ಮುಂದಾಗಿವೆ. ಹೀಗಾಗಿ ಅಖಂಡ ಉತ್ತರಕನ್ನಡವನ್ನೇ ಉಳಿಸಿ ಅನ್ನೋದು ಸ್ಥಳೀಯರ ಒತ್ತಾಯ.
ಇನ್ನು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೇಳಿದರೆ ಜಿಲ್ಲೆಯನ್ನು ವಿಭಜಿಸುವ ಕುರಿತು ಈವರೆಗೂ ಯಾರೂ ತಮ್ಮ ಗಮನಕ್ಕೆ ತಂದಿಲ್ಲ. ಜನರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಭೌಗೋಳಿಕವಾಗಿ ವಿಶಾಲವಾದ ಉತ್ತರಕನ್ನಡ ಜಿಲ್ಲೆ ವಿಭಜನೆಯ ಕೂಗು ಜೋರಾಗಿದೆ. ಸಂಸದ, ಸ್ಪೀಕರ್ ಹಾಗೂ ಸಚಿವರೂ ಸಹ ಘಟ್ಟದ ಮೇಲಿನ ತಾಲೂಕುಗಳಲ್ಲೇ ಇರುವುದರಿಂದ ಪ್ರತ್ಯೇಕ ಜಿಲ್ಲೆಯ ಬೇಡಿಕೆಗೆ ಮನ್ನಣೆ ಸಿಗುತ್ತಾ ಕಾದು ನೋಡಬೇಕಿದೆ.