ಕಾರವಾರ: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಪಕ್ಷಾಂತರ ಪರ್ವ ಜೋರಾಗಿದೆ. ಮಾಜಿ ಮುಖ್ಯಂಮತ್ರಿ ದಿ.ರಾಮಕೃಷ್ಣ ಹೆಗಡೆ ಅವರ ಮೊಮ್ಮಗ, ಜೆಡಿಎಸ್ ಮುಖಂಡ ಶಶಿಭೂಷಣ್ ಹೆಗಡೆ ಪಕ್ಷ ತೊರೆಯುತ್ತಾರೆ ಎನ್ನುವ ವಿಚಾರ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿತ್ತು. ಕೊನೆಗೂ ಜೆಡಿಎಸ್ ತೊರೆದು ಶಶಿಭೂಷಣ್ ಹೆಗಡೆ ಬಿಜೆಪಿ ಸೇರಿದ್ದಾರೆ. ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಶಿಭೂಷಣ್ ಹೆಗಡೆ ದೊಡ್ಮನೆ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡಿದ್ದಾರೆ.
ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ ಅವರ ಅಣ್ಣ ಗಣೇಶ ಹೆಗಡೆ ಅವರ ಮೊಮ್ಮಗ ಶಶಿಭೂಷಣ್ ಹೆಗಡೆ ಈ ಹಿಂದೆ ಬಿಜೆಪಿಯಲ್ಲಿಯೇ ಇದ್ದು, ಕುಮಟಾ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಅಲ್ಪ ಮತದಲ್ಲಿಯೇ ಎರಡು ಬಾರಿ ಸೋಲನ್ನು ಕಂಡಿದ್ದರು. ತನ್ನ ಸೋಲಿಗೆ ಕೆಲ ಸ್ವಪಕ್ಷೀಯ ನಾಯಕರೇ ಕಾರಣ ಎಂದು ಬೇಸರಗೊಂಡು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
2013ರಲ್ಲಿ ಜೆಡಿಎಸ್‌ನಿಂದ ಶಿರಸಿ ಸಿದ್ದಾಪುರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಶಶಿಭೂಷಣ್ ಕ್ಷೇತ್ರದಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದರು. ಭದ್ರನೆಲೆಯೇ ಇಲ್ಲದ ಪಕ್ಷದಲ್ಲಿ ಸುಮಾರು 38 ಸಾವಿರಕ್ಕೂ ಅಧಿಕ ಮತ ಪಡೆದು ಕೇವಲ 2.5 ಸಾವಿರ ಮತಗಳ ಅಂತರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ದ ಸೋಲು ಕಂಡಿದ್ದರು. ಆದರೆ 2018ರ ಚುನಾವಣೆಯಲ್ಲಿ ಮತ್ತೆ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಶಶಿಭೂಷಣ್ ಹೆಗಡೆ ದೊಡ್ಡ ಅಂತರದಲ್ಲಿಯೇ ಸೋಲು ಕಂಡ ನಂತರ ಹೆಚ್ಚು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಲಿಲ್ಲ . ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಒಮ್ಮತ ಅಭ್ಯರ್ಥಿ ಆಗುವಂತೆ ಒತ್ತಡ ಹಾಕಿದ್ದರು ಶಶಿಭೂಷಣ್ ಒಪ್ಪಿರಲಿಲ್ಲ.
ಶಶಿಭೂಷಣ್ ಹೆಗಡೆ ಅವರನ್ನ ಬಿಜೆಪಿಗೆ ಕರೆತರಲು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಆಸಕ್ತಿ ವಹಿಸಿದ್ದರು. ಕಳೆದ ಒಂದು ತಿಂಗಳ ಹಿಂದೆ ಸಿದ್ದಾಪುರಕ್ಕೆ ಆಗಮಿಸಿದ ವೇಳೆ ಅವರ ಮನೆಗೆ ತೆರಳಿ ಊಟ ಮಾಡಿದ್ದರು. ಆ ವೇಳೆಗಾಗಲೇ ಅವರು ಬಿಜೆಪಿ ಸೇರುವುದು ನಿಶ್ಚಯವಾಗಿತ್ತು. ಅದರಂತೆ ಸೋಮವಾರ ಅವರು ಬೆಂಗಳೂರಿನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ವೇಳೆ ಕೇಂದ್ರ ಸಚಿವರಾದ ಭಗವಂತ ಖೂಬಾ, ಶೋಭಾ ಕರಂದ್ಲಾಜೆ ಮೊದಲಾದವರು ಉಪಸ್ಥಿತರಿದ್ದರು.
ಚುನಾವಣಾ ಅಖಾಡಕ್ಕೆ ಇಳಿಯಲು ಸಜ್ಜಾದ ಆನಂದ್: ಮಾಜಿ ಸಚಿವ ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಚುನಾವಣಾ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಕ್ಷೇತ್ರದಲ್ಲಿ ಮುಖಂಡರ ಮನೆ ಮನೆ ಭೇಟಿ ಮೂಲಕ ಪ್ರಚಾರ ನಡೆಸುವುದಾಗಿ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ. ಕಾರವಾರ - ಅಂಕೋಲಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ, ಸಚಿವರಾಗಿ ಕೆಲಸ ನಿರ್ವಹಿಸಿದ್ದ ಆನಂದ್ ಅಸ್ನೋಟಿಕರ್ 2013 ಹಾಗೂ 2018ರ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಇದಾದ ನಂತರ ಲೋಕಸಭಾ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಯಾಗಿ ಆನಂದ್ ಕಣಕ್ಕೆ ಇಳಿದಿದ್ದರಾದರೂ ಸೋಲು ಅನುಭವಿಸಿದ್ದರು.
ನಂತರ ಕ್ಷೇತ್ರದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದೆ ನಾಪತ್ತೆಯಾಗಿದ್ದ ಆನಂದ್ ಅಸ್ನೋಟಿಕರ್ ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೆಸ್ ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಚುನಾವಣಾ ಕಣಕ್ಕೆ ಇಳಿಯದೇ ಮಾಜಿ ಶಾಸಕ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ಗೆ ಬೆಂಬಲ ಕೊಡುವ ಬಗ್ಗೆ ಸಹ ಚರ್ಚೆ ನಡೆದಿದೆ ಎನ್ನಲಾಗಿದೆ. ಆದರೆ ಈವರೆಗೂ ಗುಟ್ಟು ಬಿಟ್ಟುಕೊಡದ ಆನಂದ್ ಕ್ಷೇತ್ರದಲ್ಲಿ ಇದೀಗ ಓಡಾಟ ನಡೆಸಲು ಮುಂದಾಗಿದ್ದು ಮುಂದೆ ತಾವೇ ನಿಲ್ಲುತ್ತಾರೋ ಅಥವಾ ಕಾಂಗ್ರೆಸ್ ಪರ ಪ್ರಚಾರ ಕೈಗೊಳ್ಳುತ್ತೀರೋ ಕಾದು ನೋಡಬೇಕಿದೆ.
ಇದನ್ನೂ ಓದಿ: ಕಾಂಗ್ರೆಸ್ ತೊರೆದ ಮಾಜಿ ಸಚಿವ ಮನೋಹರ ತಹಶೀಲ್ದಾರ್ : ಏ.7ಕ್ಕೆ ಜೆಡಿಎಸ್ಗೆ ಸೇರ್ಪಡೆ