ಶಿರಸಿ : ಯಲ್ಲಾಪುರ ತಾಲೂಕಿನ ಬರಬಳ್ಳಿಯಲ್ಲಿ ನೂರಾರು ವರ್ಷಗಳಿಂದ ಜೀವನ ಸಾಗಿಸಿಕೊಂಡು ಬಂದಿದ್ದ ಕುಟುಂಬಗಳು ಕೊಡಸಳ್ಳಿ ಡ್ಯಾಂ ನಿರ್ಮಾಣದಿಂದ ನಿರಾಶ್ರಿತರಾಗಿ ಗುಳ್ಳಾಪುರ ಬಳಿಯ ಹೆಗ್ಗಾರಿಯಲ್ಲಿ ಪುನರ್ವಸತಿಯನ್ನು ಕಲ್ಪಿಸಿಕೊಂಡಿದ್ದರು. ಆದರೆ ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಗೆ ಬೇಡ್ತಿ ನದಿ ಉಕ್ಕಿ ಮನೆ, ಜಮೀನನ್ನು ಕಳೆದುಕೊಂಡು ಪುನಃ ನಿರಾಶ್ರಿತರಾಗಿದ್ದಾರೆ.
ಕೊಡಸಳ್ಳಿ ಡ್ಯಾಂ ನಿರ್ಮಾಣ ಮಾಡುವ ಸಂದರ್ಭದಲ್ಲಿ ನದಿ ಪಾತ್ರದ ಸುಮಾರು 600 ಕ್ಕೂ ಅಧಿಕ ಕುಟುಂಬಗಳಿಗೆ ಅಂಕೋಲಾ ತಾಲೂಕಿನ ಹೆಗ್ಗಾರಿನಲ್ಲಿ ನಿರಾಶ್ರಿತರ ಪಟ್ಟ ಕಟ್ಟಿ ಪುನರ್ವಸತಿಯನ್ನು ಕಲ್ಪಿಸುಕೊಡಲಾಗಿತ್ತು. ಆದರೆ ಹಿಂದೆಂದೂ ಕಾಣದಂತಹ ಕುಂಭದ್ರೋಣ ಮಳೆಗೆ ಸುಮಾರು 200ಕ್ಕೂ ಅಧಿಕ ಕುಟುಂಬಗಳು ಮತ್ತೊಮ್ಮೆ ನಿರಾಶ್ರಿತರಾಗಿದ್ದು, ಮನೆ, ಜಾನುವಾರು, ಜಮೀನು ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿವೆ.
ಕಳೆದ ಒಂದು ವಾರದ ಹಿಂದೆ ಬೇಡ್ತಿ ನದಿ ಉಕ್ಕಿ ಹೆಗ್ಗಾರಿನ ಮನೆ, ಜಮೀನು, ಜಾನುವಾರುಗಳು ನೀರು ಪಾಲಾಗಿವೆ. ಮನೆಯ ಒಳಗಡೆ ಏನಿದೆ, ಏನಿಲ್ಲ ಎಂದು ಗೊತ್ತಿಲ್ಲ. ಒಂದು ವಾರದಿಂದ ಇನ್ನೊಬ್ಬರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದೇವೆ. ಮನೆಗೆ ತೆರಳಲು, ಕುಡಿಯಲೂ ನೀರಿಲ್ಲದ ಪರಿಸ್ಥಿತಿ ಇದೆ. ಜಾನುವಾರುಗಳ ಸ್ಥಿತಿ ಏನಾಗಿದೆ ತಿಳಿಯುತ್ತಿಲ್ಲ ಎಂದು ಕಣ್ಣೀರು ಹಾಕ್ತಿದ್ದಾರೆ ಅಲ್ಲಿನ ಜನ.
ಗುಳ್ಳಾಪುರ ಸೇತುವೆಗೆ ತಾಗಿಕೊಂಡಿರುವ ಶೇವ್ಕಾರ್ ಗ್ರಾಮದಲ್ಲಿ ಸಿದ್ಧಿ ಜನಾಂಗದ 10 ಕ್ಕೂ ಅಧಿಕ ಮನೆಗಳಿದ್ದು, ಎಲ್ಲವೂ ನೀರಿನಲ್ಲಿ ಮುಳುಗಿ ಅವರ ಜೀವನ ಮೂರಾಬಟ್ಟೆಯಾಗಿದೆ. 20 ಕ್ಕೂ ಹೆಚ್ಚು ಕೋಳಿ, ಜಾನುವಾರುಗಳು ನೀರು ಪಾಲಾಗಿದ್ದು, ಮನೆಗಳು ಕುಸಿದಿದೆ. ದನದ ಕೊಟ್ಟಿಗೆ ನೀರಿನಲ್ಲಿ ತೆಲಿಕೊಂಡು ಹೋಗಿದ್ದು, ಟಿವಿ, ಕುರ್ಚಿ, ಅಡಿಕೆ ತೋಟಗಳು ನೀರು ಪಾಲಾಗಿದೆ. ಇದಲ್ಲದೇ ಹಳವಳ್ಳಿ, ಕಲ್ಲೇಶ್ವರ, ಕೋನಾಳಗಳಲ್ಲಿ ಪುನರ್ವಸತಿ ಸೌಲಭ್ಯದ ಅಗತ್ಯವಿದೆ.