ಶಿರಸಿ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಕ್ಷೇತ್ರ ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿದೆ. ಸ್ವತಃ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ ಆರ್ ವಿ ದೇಶಪಾಂಡೆ ಸತತ 10 ದಿನಗಳ ಕಾಲ ಕ್ಷೇತ್ರದಲ್ಲಿ ಟೆಂಟ್ ಹಾಕಿ ಮತದಾರರ ಮನವೊಲಿಸುವ ಪ್ರಯತ್ನ ನಡೆಸಲಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಪ್ರಶ್ನಾತೀತ ನಾಯಕ ಆರ್ ವಿ ದೇಶಪಾಂಡೆಗೆ ಇದು ಪ್ರತಿಷ್ಠೆಯ ಕಣವಾಗಿದೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯನ್ನೂ ಸಹ ಅವರಿಗೇ ನೀಡಲಾಗಿದೆ. ಬಿಜೆಪಿ ಅಭ್ಯರ್ಥಿಯಾಗಿರುವ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಸಹ ದೇಶಪಾಂಡೆಯವರ ಕಾರಣದಿಂದ ಪಕ್ಷ ಬಿಟ್ಟಿರುವುದಾಗಿ ಹೇಳಿದ್ದು ದೇಶಪಾಂಡೆಗೆ ನುಂಗಲಾರದ ತುತ್ತಾಗಿದೆ. ಆದ ಕಾರಣ ಕ್ಷೇತ್ರದಲ್ಲೇ ಉಳಿದು ಕಾಂಗ್ರೆಸ್ ಗೆಲ್ಲಿಸುವ ಪ್ರಯತ್ನ ನಡೆಯುತ್ತಿದೆ.
ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೇವಲ 2ರಲ್ಲಿ ಮಾತ್ರ ಜಯಗಳಿಸಿತ್ತು. ಈಗ ಅದರಲ್ಲೂ ಒಂದನ್ನು ಕಳೆದುಕೊಂಡಿದೆ. ಪರಿಣಾಮ ಜಿಲ್ಲೆಯಲ್ಲಿ ಕೇವಲ ಒಂದು ಸ್ಥಾನ ಮಾತ್ರ ಕಾಂಗ್ರೆಸ್ ಹೊಂದಿದೆ. ಇದರಿಂದ ಒಂದು ಕಾಲದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಉತ್ತರ ಕನ್ನಡವನ್ನು ಪುನಃ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಪಕ್ಷಕ್ಕೂ ಅನಿವಾರ್ಯವಾಗಿದೆ. ಅಲ್ಲದೇ ಸರ್ಕಾರ ಉರುಳಲು ಕಾರಣರಾದ ಹೆಬ್ಬಾರರನ್ನು ರಾಜಕೀಯವಾಗಿ ಸೋಲಿಸುವ ತಂತ್ರಗಾರಿಕೆ ಹೆಣೆಯಲಾಗುತ್ತಿದೆ.
ಇನ್ನು, ಈಗಿನ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಹುಭಾಗ 2008 ಕ್ಷೇತ್ರ ವಿಂಗಡನೆ ಮೊದಲು ಹಳಿಯಾಳ ಕ್ಷೇತ್ರ ವ್ಯಾಪ್ತಿಗೆ ಬರುತ್ತಿತ್ತು. ಆಗ ಆರ್.ವಿ.ದೇಶಪಾಂಡೆ ಸತತ 6 ಬಾರಿ ಶಾಸಕರು ಆಯ್ಕೆಯಾಗಿದ್ದರು. ಇದರಿಂದ ಅವರಿಗೆ ಕ್ಷೇತ್ರದ ಮೇಲೆ ಹಿಡಿತವಿದೆ. ಆ ಕಾರಣದಿಂದ ಅವರು ಖುದ್ದು ಎಲ್ಲಾ ಕಡೆ ಪ್ರಚಾರಕ್ಕೆ ತೆರಳಿ ಮತ ಬೇಟೆಯಾಡಲಿದ್ದಾರೆ. ಅವರ ಈ ಯೋಜನೆಗಳು ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ ಎಂದು ಕಾದು ನೋಡಬೇಕಾಗಿದೆ.