ಕಾರವಾರ: ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯವಹಿಸಿದ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ತೀವ್ರವಾಗಿ ತರಾಟೆ ತಡಗೆದುಕೊಂಡ ಘಟನೆ ಇಂದು ಕಾರವಾರದಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ನೀರಿನ ಅಭಾವ ನೀಗಿಸಲು ನೀರಿನ ಹೆಚ್ಚು ಲಭ್ಯತೆ ಇರುವ ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಿ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಐದು ತಿಂಗಳ ಹಿಂದೆ ಸೂಚಿಸಲಾಗಿತ್ತು. ಆದರೆ ಈವರೆಗೆ ಒಪ್ಪಂದ ಮಾಡಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ ಶಿರಸಿ ತಹಶೀಲ್ದಾರ ಸೇರಿದಂತೆ ಇನ್ನಿತರರಿಗೆ ಸೋಕಾಸ್ ನೋಟಿಸು ನಿಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಬೋರ್‌ವೆಲ್ ಆಳ ಕೊರೆಯಲು, ಪೈಪ್ ಲೈನ್ ವಿಸ್ತರಿಸಲು, ಖಾಸಗಿ ಬೋರ್ ಒಪ್ಪಂದದ ಮೇಲೆ ನೀರು ಖರೀದಿಸಲು ಜಿಲ್ಲಾಧಿಕಾರಿಗಳ ಬಳಿ ಅನುದಾನ ಲಭ್ಯವಿದೆ. ಈ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಟ್ಯಾಂಕರ್ ನೀರು ಸರಬರಾಜು ಅಗತ್ಯವಿರುವೆಡೆ,ಕಡ್ಡಾಯವಾಗಿ ಟ್ಯಾಂಕರ್‌ಗೆ ಜಿಪಿಎಸ್ ಇರಬೇಕು. ಇದರಲ್ಲಿ ಅವ್ಯವಹಾರವಾದರೆ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಪರಿಹಾರ ತಹಸೀಲ್ದಾರ್ ಜವಾಬ್ದಾರಿ. ಪ್ರತಿ ವ್ಯಕ್ತಿಗೆ 40 ಲೀಟರ್ ಪ್ರತಿ ದಿನ ಕಡ್ಡಾಯವಾಗಿ ಕೊಡಬೇಕು. ಜಾನುವಾರುಗಳಿಗೆ ಮೇವು, ನೀರು ಅಗತ್ಯವಾಗಿ ಆಗಬೇಕು. ಗುಳೆ ಹೋಗದಂತೆ ಜನರಿಗೆ ಉದ್ಯೋಗ ಸಿಗಬೇಕು. ಈ ವಿಷಯಗಳಿಗೆ ಹಣದ ಕೊರತೆ ಇಲ್ಲ. ನಗರ ಪ್ರದೇಶದಲ್ಲಿ ಟ್ಯಾಂಕರ್ ಸರಬರಾಜು ಮಾಡುತ್ತಿದ್ದು ಅನುದಾನದ ಕೊರತೆ ಇದ್ದರೆ ನಗರಾಭಿವೃದ್ಧಿ ಇಲಾಖೆಗೆ ತಕ್ಷಣ ಪತ್ರ ಬರೆಯಿರಿ. ಕುಡಿಯುವ ನೀರಿನ ಸಂಬಂಧ ಪ್ರತಿ ತಹಸೀಲ್ದಾರ್ ಬಳಿ ಕಡ್ಡಾಯವಾಗಿ 15 ಲಕ್ಷ ರೂ ಇರಬೇಕು. ಕೊರತೆ ಬಿದ್ದರೆ ತಕ್ಷಣ ಡಿಸಿಯವರಿಗೆ ಪತ್ರ ಬರೆಯಬೇಕು. ಡಿಸಿಯವರು ಅಂದೇ ಅನುದಾನ ಬಿಡುಗಡೆ ಮಾಡಬೇಕು ಎಂದು ಅಧಿಕಾರಿಗಳಿಗೆ ದೇಶಪಾಂಡೆ ಖಡಕ್ ಎಚ್ಚರಿಕೆ ನೀಡಿದರು.