ಕಾರವಾರ: ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಹಿನ್ನೆಲೆಯಲ್ಲಿ ಶಾಸಕಿ ರೂಪಾಲಿ ನಾಯ್ಕ ಆಡಿದ ಹೇಳಿಕೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಂಕೋಲಾದಲ್ಲಿ ನಡೆದ ಶಿವಾಜಿ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ, ನಮ್ಮ ಹುಡುಗ ದಾರುಣವಾಗಿ ಸಾವನ್ನಪ್ಪಿದ್ದಾನೆ. ನಾವು ಅಧಿವೇಶನದಲ್ಲಿ ಕುಳಿತು ಅತ್ತಿದ್ದೇವೆ. ಆದ್ರೆ ನಾವೂ ಸಹ ಹಿಂದೂಗಳು ಎಂದು ಹೇಳಿಕೊಳ್ಳುವವರು ವಿಧಾನಸಭೆಯ ಒಳಗೆ ಇದ್ದು, ಸಚಿವ ಈಶ್ವರಪ್ಪರನ್ನು ಅಮಾನತು ಮಾಡಿ ಎಂದು ಆಗ್ರಹಿಸುತ್ತಿದ್ದರು. ಇದು ನಾಚಿಕೆಗೇಡಿನ ಸಂಗತಿ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ನಮ್ಮವರಿಗೆ ಆದ ಅನ್ಯಾಯವನ್ನು ಎತ್ತಿ ಹಿಡಿಯಬೇಕು. ಆದರೆ, ಘಟನೆಯ ಬಗ್ಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಬೇಕಾದವರು ಈಶ್ವರಪ್ಪ ಅವರನ್ನು ವಜಾ ಮಾಡಬೇಕು ಎಂದು ಪ್ರತಿಭಟನೆ ಮಾಡಿರುವುದು ದುರ್ದೈವ ಎಂದು ಕಿಡಿಕಾರಿದರು.